ಹೈದರಾಬಾದ್, ಡಿ 1 (Daijiworld News/MB) : ತೆಲಂಗಾಣ ಪಶುವೈದ್ಯೆ ಅತ್ಯಾಚಾರ ನಡೆಸಿ ಹತ್ಯೆಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಪೊಲೀಸರನ್ನು ನಿರ್ಲಕ್ಷ್ಯ ತೋರಿದ ಹಿನ್ನಲೆಯಲ್ಲಿ ಅಮಾನತುಗೊಳಿಸಲಾಗಿದೆ.
ಪ್ರಿಯಾಂಕಾ ನಾಪತ್ತೆಯಾಗಿದ್ದಾರೆ ಎಂದು ಪೋಷಕರು ಪೊಲೀಸರಿಗೆ ದೂರು ಕೊಡಲು ಹೋದಾಗ ಶಂಶಾಬಾದ್ ಠಾಣೆಯ ಪೊಲೀಸರು ನಿರ್ಲಕ್ಷ್ಯ ತೋರಿದಲ್ಲದೇ ಒಂದು ಠಾಣೆಯಿಂದ ಇನ್ನೊಂದು ಠಾಣೆಗೆ ಅಲೆದಾಡಿಸಿದ್ದಾರೆ. ಈ ರೀತಿ ನಿರ್ಲಕ್ಷ್ಯ ಮಾಡದಿದ್ದಲ್ಲಿ ಈ ಅನಾಹುತ ನಡೆಯುವುದನ್ನು ತಡೆಯಬಹುದಿತ್ತು ಎಂದು ಮಹಿಳಾ ರಾಷ್ಟ್ರೀಯ ಆಯೋಗ(ಎನ್ಡಬ್ಲುಸಿ) ಕಾರ್ಯಕರ್ತರು ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ನಿರ್ಲಕ್ಷ್ಯ ಮೆರೆದ ಶಂಶಾಬಾದ್ ಪೊಲೀಸ್ ಠಾಣೆಯ ಎಸ್ಐ ಎಂ. ರವಿ ಕುಮಾರ್, ರಾಜೀವ್ ಗಾಂಧಿ ಅಂತರಾಷ್ಟ್ರೀಯ ಏರ್ಪೋರ್ಟ್ ಪೊಲೀಸ್ ಠಾಣೆಯ ಮುಖ್ಯ ಪೇದೆ ಪಿ. ವೇಣುಗೋಪಾಲ್ ರೆಡ್ಡಿ ಹಾಗೂ ಎ. ಸತ್ಯನಾರಾಯಣ ಗೌಡ್ ಅವರನ್ನು ಅಮಾನತು ಮಾಡಲಾಗಿದೆ.
ನಿರ್ಲಕ್ಷ್ಯ ತೋರಿದ ಮೂವರು ಪೊಲೀಸರನ್ನು ಈಗಾಗಲೇ ಅಮಾನತುಗೊಳಿಸಿದ್ದು, ಮುಂದಿನ ಆದೇಶದವರೆಗೂ ಅವರು ಕೆಲಸಕ್ಕೆ ಹಾಜರಾಗುವಂತಿಲ್ಲ. ಪ್ರಿಯಾಂಕ ನಾಪತ್ತೆ ದೂರು ದಾಖಲಿಸಿಕೊಳ್ಳದೆ ಪೊಲೀಸರು ಸಮಯ ವ್ಯರ್ಥ ಮಾಡಿದ್ದಾರೆ ಎಂದು ಸೈಬರಾಬಾದ್ ಪೊಲೀಸ್ ಆಯುಕ್ತರಾದ ವಿ.ಸಿ ಸಜ್ಜನರ್ ತಿಳಿಸಿದ್ದಾರೆ.
ಈ ಕುರಿತು ಮಾತಾನಾಡಿದ ತಂದೆ, ಬುಧವಾರ ರಾತ್ರಿ 9.15ಕ್ಕೆ ಸೋದರಿ ಜೊತೆ ಮಾತನಾಡಿದ್ದು ಆ ಬಳಿಕ ಮೊಬೈಲ್ ಸ್ವಿಚ್ ಆಫ್ ಆಗಿದೆ. ಚಾರ್ಜ್ ಇಲ್ಲದೆ ಫೋನ್ ಆಫ್ ಆಗಿರಬಹುದೆಂದು ತಿಳಿದು ನಾವು ಆಕೆಯನ್ನು ಹುಡುಕಿಕೊಂಡು ಟೋಲ್ ಪ್ಲಾಜಾ ಬಳಿ ಹೋದೆವು. ಆದರೆ ಅಲ್ಲಿ ಪ್ರಿಯಾಂಕ ಇರಲಿಲ್ಲ. ನಂತರ ಮಗಳು ಕಾಣೆಯಾದ ಬಗ್ಗೆ ದೂರು ನೀಡಲು ಶಂಶಾಬಾದ್ ಠಾಣೆಗೆ ಹೋದೆವು. ಆದರೆ ಈ ಪ್ರಕರಣ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂಬ ನೆಪ ಹೇಳಿ, ಪೊಲೀಸರು ನಮ್ಮನ್ನು ಒಂದು ಠಾಣೆಯಿಂದ ಮತ್ತೊಂದು ಠಾಣೆಗೆ ಅಲೆದಾಡಿಸಿದ್ದಾರೆ. ಪೊಲೀಸರು ಈ ಪ್ರಕರಣ ಯಾವ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುತ್ತದೆ ಎನ್ನುವುದನ್ನ ನಿರ್ಧರಿಸುವಲ್ಲೇ ಕಾಲ ಹರಣ ಮಾಡಿದರು. ಕೊನೆಗೆ ಇಬ್ಬರು ಕಾನ್ಸ್ಟೇಬಲ್ಗಳ ನೆರವು ಕೋರಿದೆವು. ಆದರು ಏನೂ ಪ್ರಯೋಜನವಾಗಲಿಲ್ಲ. ಮಗಳನ್ನು ಹುಡುಕಿಕೊಂಡು ಗುರುವಾರ ಬೆಳಗ್ಗಿನ ಜಾವ 3 ಗಂಟೆಗೆ ನಾನೇ ಹೋದೆ ಎಂದು ತಿಳಿಸಿದ್ದಾರೆ.
26 ವರ್ಷದ ಪಶುವೈದ್ಯೆ ಪ್ರಿಯಾಂಕ ರೆಡ್ಡಿಯನ್ನು ಸ್ಕೂಟಿ ಪಂಕ್ಚರ್ ಹಾಕಿಸಿಕೊಡುವ ನೆಪದಲ್ಲಿ ಲಾರಿ ಚಾಲಕ ಮಹ್ಮದ್ ಪಾಷಾ, ಮೂವರು ಕ್ಲೀನರ್ಗಳಾದ ನವೀನ್, ಚೆನ್ನಕೇಶವುಲು ಮತ್ತು ಶಿವಾ ಸೇರಿ ಕಿಡ್ನಾಪ್ ಮಾಡಿ, ಸಾಮೂಹಿಕ ಅತ್ಯಾಚಾರ ಮಾಡಿದ್ದರು. ಅಲ್ಲದೆ ವೈದ್ಯೆಯ ಮೃತ ದೇಹವನ್ನು ಸುಟ್ಟು ಹಾಕಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಸೈಬರಾಬಾದ್ ಪೊಲೀಸರು, ನಾಲ್ವರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿಗಳನ್ನು 14 ದಿನಗಳ ಕಾಲ ರಿಮ್ಯಾಂಡ್ನಲ್ಲಿ ಇರಿಸುವಂತೆ ಕೋರ್ಟ್ ಆದೇಶಿಸಿದೆ.