ಹೈದರಾಬಾದ್, ಡಿ 1 (Daijiworld News/MB) : ಪಶುವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಯ ತಾಯಿಯೊಬ್ಬರು "ಸಂತ್ರಸ್ತೆಯನ್ನು ಅವರು ಹೇಗೆ ಬೆಂಕಿ ಇಟ್ಟು ಸುಟ್ಟರೋ ಹಾಗೇ ಅವರನ್ನೂ ಸುಟ್ಟು ಹಾಕಿ. ಅವರಿಗೆ ಗಲ್ಲು ಶಿಕ್ಷೆ ನೀಡಿದರೂ ನಾವು ಅದನ್ನು ವಿರೋಧ ಮಾಡುವುದಿಲ್ಲ" ಎಂದಿದ್ದಾರೆ.
"ನಾನು ಒಬ್ಬಳು ಹೆಣ್ಣು. ನನಗೂ ಹೆಣ್ಣು ಮಕ್ಕಳಿದ್ದಾರೆ. ಮಗಳಿಗೆ ಚಿತ್ರಹಿಂಸೆ ಕೊಟ್ಟು ಸಾಯಿಸಿದಾಗ ಆಗುವ ನೋವು ಏನೆಂಬುದು ನನಗೆ ಅರ್ಥವಾಗುತ್ತದೆ. ನನ್ನ ಮಗ ತಪ್ಪಿತಸ್ಥ ಆಗಿದ್ದರೆ ಆತನಿಗೆ ಶಿಕ್ಷೆ ಖಂಡಿತ ಆಗಬೇಕು. ಈ ರೀತಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡಿ ಹೀನಾಯ ಕೆಲಸ ಮಾಡುವವರಿಗೆ ಕಠಿಣ ಶಿಕ್ಷೆ ಕೊಡಬೇಕು. ಬೇಕಾದರೆ ಪ್ರಿಯಾಂಕ ರೆಡ್ಡಿಯನ್ನು ಹೇಗೆ ಆರೋಪಿಗಳು ಅಮಾನುಷವಾಗಿ ಕೊಲೆಗೈದಿದ್ದಾರೋ ಹಾಗೆಯೇ ನನ್ನ ಮಗನನ್ನೂ ಸುಟ್ಟುಹಾಕಿ" ಎಂದು ತಾಯಿ ಕಣ್ಣೀರಿಟ್ಟಿದ್ದಾರೆ.
"ಇಂತಹ ಅಮಾನುಷ ಕೃತ್ಯ ಮಾಡಿದ ನನ್ನ ಪುತ್ರನ ಪರವಾಗಿ ನಾನು ನಿಂತರೆ ಜನರು ನನ್ನನ್ನು ಜೀವಮಾನವಿಡಿ ದ್ವೇಷಿಸುತ್ತಾರೆ" ಎಂದು ಹೇಳಿದ್ದಾರೆ.
ಆರೋಪಿಗಳ ವೈದ್ಯಕೀಯ ಪರೀಕ್ಷೆ ಆದ ಬಳಿಕ ಪೊಲೀಸರು ನಾಲ್ವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ವೇಳೆ ನ್ಯಾಯಾಲಯ ಆರೋಪಿಗಳನ್ನು 14 ದಿನಗಳ ಕಾಲ ರಿಮ್ಯಾಂಡ್ನಲ್ಲಿ ಇರಿಸುವಂತೆ ಆದೇಶಿಸಿದೆ.