ಬೆಂಗಳೂರು, ಡಿ 1 (Daijiworld News/MB) : ಮಗು ಹೆಣ್ಣು ಎಂಬ ಕಾರಣಕ್ಕೆ ಅಜ್ಜಿಯು 8 ದಿನಗಳ ಮನೆಯ ಕಿಟಕಿಯಿಂದ ಹೊರಗೆ ಎಸೆದು ಹತ್ಯೆ ಮಾಡಿದ ದಾರುಣ ಘಟನೆ ನಗರದ ಹೊರವಲಯದ ಸೋಲದೇವನಹಳ್ಳಿ ಸಮೀಪ ಶುಕ್ರವಾರ ನಡೆದಿದೆ.
ಮಾರ್ಷಲ್ ಹಾಗೂ ತಮಿಳು ಸೆಲ್ವಿ ದಂಪತಿಗಳು ಮೇದರಹಳ್ಳಿ ನಿವಾಸಿಗಳಾಗಿದ್ದು ಇವರ 8 ದಿನಗಳ ಕೂಸನ್ನು ಅಜ್ಜಿಯೇ ಹತ್ಯೆ ಮಾಡಿದ್ದಾರೆ.
ಈ ಘಟನೆಗೆ ಸಂಬಂಧಿಸಿ ಆರೋಪಿ ಅಜ್ಜಿ ಪರಮೇಶ್ವರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಾರ್ಷಲ್ ಹಾಗೂ ತಮಿಳು ಸೆಲ್ವಿ ತಮಿಳುನಾಡು ಮೂಲದವರಾಗಿದ್ದು ವರ್ಷದ ಹಿಂದೆ ಪ್ರೇಮವಿವಾಹವಾಗಿದ್ದರು. ಸೆಲ್ವಿಯು 8 ತಿಂಗಳಲ್ಲೇ ಮಗುವಿಗೆ ಜನನ ನೀಡಿದ ಹಿನ್ನಲೆಯಲ್ಲಿ ಮಗುವಿಗೆ ಜಾಂಡೀಸ್ ಕಂಡುಬಂದಿತ್ತು. ಶುಕ್ರವಾರ ರಾತ್ರಿ 9 ಗಂಟೆ ಸುಮಾರಿಗೆ ಅತ್ತೆಯ ಬಳಿ ಮಗು ಬಿಟ್ಟು ಶೌಚಾಲಯಕ್ಕೆ ತೆರಳಿದ್ದರು. 10 ನಿಮಿಷದ ನಂತರ ಮಗುವನ್ನು ಮಗುವನ್ನು ಎತ್ತಿಕೊಳ್ಳಲು ಬಂದಾಗ ಮಗು ಇರಲಿಲ್ಲ. ಈ ಬಗ್ಗೆ ಅಜ್ಜಿಯನ್ನು ಕೇಳಿದಾಗ ನನಗೇನು ಗೊತ್ತಿಲ್ಲ ಎಂದು ಹೇಳಿದ್ದಾರೆ.
ಈ ವಿಷಯವನ್ನು ಪತ್ನಿ ಪತಿಗೆ ತಿಳಿಸಿದ್ದು ಪತಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಖಾಲಿ ನಿವೇಶನದಲ್ಲಿ ಮಗು ಪತ್ತೆಯಾಗಿದೆ.
ಹೆಣ್ಣು ಮಗು ಎಂಬ ಕಾರಣಕ್ಕೆ ಮಗುವನ್ನು ಹತ್ಯೆ ಮಾಡಲಾಗಿದೆ ಎಂದು ದೂರಲಾಗಿದ್ದು ಈ ಕುರಿತು ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.