ಬೆಂಗಳೂರು, ಡಿ 1 (Daijiworld News/MB) : ನಾವು ಡಿಸೆಂಬರ್ 9ರ ಬಳಿಕ ಗುಡ್ನ್ಯೂಸ್ ನೀಡುತ್ತೇವೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಪ್ರಿಕಾಗೋಷ್ಠಿ ನಡೆಸಿ ಮಾತಾನಾಡಿದ ಅವರು, ರಾಜ್ಯ ಮತ್ತು ರಾಷ್ಟ್ರದಲ್ಲಿ ಪ್ರತಿಯೊಂದು ಚುನಾವಣೆಗಳಲ್ಲಿ ಅಧಿಕಾರದ ದುರುಪಯೋಗ ನಡೆಸಿ ಅಭ್ಯರ್ಥಿಗಳಿಗೆ ಹೆದರಿಸಲಾಗುತ್ತಿದೆ. ಬಿಜೆಪಿಗೆ ಸೇರಿರುವ ಅಭ್ಯರ್ಥಿಗಳಿಗೆ ಸೋಲು ಖಚಿತ. ಅನರ್ಹರಿಗೆ ರಾಜ್ಯದ ಜನರೇ ಬುದ್ಧಿ ಕಲಿಸಲಿದ್ದಾರೆ. ಮಹಾರಾಷ್ಟ್ರದಲ್ಲಿ ಎನ್ಸಿಪಿ ಮತ್ತು ಕಾಂಗ್ರೆಸ್ ನಿಂದ ಬಿಜೆಪಿಗೆ ಸೇರಿದ್ದ ಶೇ.79ರಷ್ಟು ಅಭ್ಯರ್ಥಿಗಳು ಸೋಲು ಕಂಡಿದ್ದು ಅಲ್ಲಿ ಆದಂತೆ ಇಲ್ಲಿಯೂ ಆಗುತ್ತದೆ. ಈ ಉಪಚುನಾವಣೆ ಕರ್ನಾಟಕಕ್ಕೆ ಮಾತ್ರವಲ್ಲ, ಬೇರೆ ರಾಜ್ಯಗಳ ಮೇಲೂ ಪರಿಣಾಮ ಬೀರುತ್ತದೆ ಎಂದು ತಿಳಿಸಿದ್ದಾರೆ.
ಜೆಡಿಎಸ್ ಜೊತೆಗಿನ ಮೈತ್ರಿ ಕುರಿತು ಮಾಧ್ಯಮ ಪ್ರಶ್ನಿಸಿದಾಗ ಡಿಸೆಂಬರ್ 9ರವರೆಗೂ ತಾಳ್ಮೆಯಿಂದಿರಿ. ನಂತರ ಗುಡ್ನ್ಯೂಸ್ ನೀಡುತ್ತೇವೆ. ಸಿದ್ದರಾಮಯ್ಯ ಮುಂದಿನ ಸಿಎಂ ಎಂಬ ಪ್ರಚಾರ ವಿಚಾರದ ಆ ಪ್ರಶ್ನೆ ಉದ್ಭವಿಸುವುದಿಲ್ಲ. ಹೈಕಮಾಂಡ್ ನಾಯಕರು ಮುಂದೆ ಸಿಎಂ ಯಾರು? ನಾಯಕತ್ವದ ಜವಾಬ್ದಾರಿ ಯಾರು ತೆಗೆದುಕೊಳ್ಳಬೇಕು ಎಂಬುದನ್ನು ನಿರ್ಧಾರ ಮಾಡುತ್ತಾರೆ. ಈಗ ಕಾಂಗ್ರೆಸ್ ರಿಯಾಲಿಟಿ ಬಗ್ಗೆ ಮಾತ್ರ ಯೋಚನೆ ಮಾಡುತ್ತಿದೆ. ಪ್ರತಿ ಸಾರಿ ನಾನು ಸಿಎಂ, ಎಐಸಿಸಿ ಅಧ್ಯಕ್ಷ ಎಂದು ಹೇಳಿಯೇ ನನ್ನ ಹೀಗೆ ಮಾಡಿ ಕೂರಿಸಿದ್ದೀರಾ ಎಂದು ಖರ್ಗೆ ಹೇಳಿದರು.
ಬಿಜೆಪಿ ಚುನಾವಣೆ ಗೆಲ್ಲುವ ಪ್ರಯತ್ನವನ್ನು ಹಣ ಬಲದಿಂದ ಸಾಕಷ್ಟು ಮಾಡಿದ್ದಾರೆ, ಈಗಲೂ ಮಾಡುತ್ತಿದ್ದಾರೆ. ಹಾಗೆಯೇ ಕೆಲವು ಬಾರಿ ಪ್ರಯತ್ನಗಳಲ್ಲಿ ಯಶಸ್ವಿಯಾಗಿದ್ದಾರೆ. ಹಣ ನಡೆಯಲಿಲ್ಲ ಅಂದ್ರೆ ಧರ್ಮ ಜಾತಿ ಮಾತುಗಳನ್ನಾಡಿ ಜನರನ್ನ ಭಾವುಕರನ್ನಾಗಿ ಮಾಡಿ ಸಿಂಪಥಿ ಮೂಲಕ ಮತ ಪಡೆಯಲು ಮುಂದಾಗುತ್ತಾರೆ. ಧರ್ಮದ ಹೆಸರಲ್ಲಿ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.
ಬಿಜೆಪಿಯವರು ನಮ್ಮ ಸರ್ಕಾರ ಕೇಂದ್ರದಲ್ಲಿ ಬಂದರೆ ಹಣದ ಹೊಳೆ ಹರಿಯುತ್ತೆ ಎಂದು ಪ್ರಚಾರ ಮಾಡಿದರು. ಆದರೆ ನೆರೆ ಹಾನಿಗೆ ಕೇಂದ್ರ ಸರ್ಕಾರ ಸ್ಪಂದಿಸಲಿಲ್ಲ. ಪ್ರಧಾನಿಗಳಾದ ಮೋದಿ ಅವರು ಕರ್ನಾಟಕಕ್ಕೇ ಬರಲಿಲ್ಲ. ಕರ್ನಾಟಕವನ್ನು ಮೂಸಿಯೂ ನೋಡಲಿಲ್ಲ. ಪ್ರಧಾನಿಗಳು ಯಡಿಯೂರಪ್ಪರ ಮೇಲಿನ ಸಿಟ್ಟನ್ನು ಕರ್ನಾಟಕದ ಜನರ ಮೇಲೆ ತೀರಿಸಿಕೊಳ್ಳುತ್ತಿದ್ದಾರೋ ಗೊತ್ತಿಲ್ಲ. ಪ್ರವಾಹಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಹಣ ತರಲು ರಾಜ್ಯದ ಬಿಜೆಪಿ ನಾಯಕರು ಪ್ರಯತ್ನಿಸಲಿಲ್ಲ. ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದಿದ್ದು, ಬರೀ ಸರ್ಕಾರವನ್ನ ಹೇಗೆ ಉಳಿಸಿಕೊಳ್ಳಬೇಕು ಪ್ರಯತ್ನದಲ್ಲೇ ತೊಡಗಿದ್ದಾರೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.