ಮಹಾರಾಷ್ಟ್ರ, ಡಿ 1 (Daijiworld News/MB) : "ಜನರ ಆಶೀರ್ವಾದದ ಬಲದಿಂದ ಮತ್ತು ನನ್ನ ಅದೃಷ್ಟದಿಂದಾಗಿ ನಾನಿಂದು ಈ ಸ್ಥಾನದಲ್ಲಿದ್ದೇನೆ. ದೇವೇಂದ್ರ ಫಡ್ನವೀಸ್ ಅವರಿಂದ ನಾನು ಬಹಳಷ್ಟು ಕಲಿತಿದ್ದೇನೆ ಮತ್ತು ಅವರ ಜೊತೆಗಿನ ನನ್ನ ಮಿತ್ರತ್ವ ಮುಂದುವರಿಯಲಿದೆ'" ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.
ನೂತನ ವಿಧಾನ ಸಭೆಯ ಎರಡನೇ ದಿನದ ಅಧಿವೇಶನದಲ್ಲಿ ಮಾತನಾಡಿದ ಅವರು 'ಯಾವತ್ತೂ ಜನರ ವಿಶ್ವಾಸಕ್ಕೆ ದ್ರೋಹ ಮಾಡಬೇಡಿ ಮತ್ತು ಜನರ ಬೆನ್ನಿಗೆ ಚೂರಿ ಹಾಕುವ ಕೆಲಸವನ್ನು ಮಾಡಬೇಡಿ ಎಂದು ನನ್ನ ಮಂತ್ರಿಗಳಿಗೆ ಹೇಳಿದ್ಧೇನೆ. ಸರಕಾರವನ್ನು ಅಸ್ಥಿರಗೊಳಿಸುವ ಕೆಲಸಕ್ಕೆ ನಾನು ಯಾವತ್ತೂ ಕೈ ಹಾಕುವ ಪ್ರಯತ್ನವನ್ನು ಮಾಡಲಿಲ್ಲ. ಹಾಗೆಯೇ ಮಂತ್ರಿಗಳಿಗೂ ಅದನ್ನೇ ಹೇಳಿದ್ದೇನೆ' ಎಂದು ಠಾಕ್ರೆ ತಿಳಿಸಿದರು.
ಹಾಗೆಯೇ "ದೇವೇಂದ್ರ ಫಡ್ನವೀಸ್ ಅವರನ್ನು ನಾನು ವಿರೋಧ ಪಕ್ಷದ ನಾಯಕನೆಂದು ಕರೆಯುವುದಿಲ್ಲ. ನಾನು ನಿಮ್ಮನ್ನು ಜವಾಬ್ದಾರಿಯುತ ನಾಯಕನೆಂದು ಕರೆಯುತ್ತೇನೆ. ದೊಡ್ಡ ಪಕ್ಷದ ನಾಯಕನೆಂದು ಕರೆಯುತ್ತೇನೆ. ಈ ಮುಖೇನ ನಾವೆಲ್ಲರೂ ಜೊತೆಗೂಡಿ ರಾಜ್ಯದ ಅಭಿವೃದ್ಧಿಗೆ ಕೆಲಸ ಮಾಡಲು ಸಾಧ್ಯ" ಎಂದರು.