ಬೆಂಗಳೂರು, ಡಿ.02(Daijiworld News/ss): ದೇಶದ ಆರ್ಥಿಕತೆ ಕುಸಿಯುತ್ತಿರುವುದರಿಂದ ಉದ್ಯೋಗಾವಕಾಶ ಕೂಡ ಕ್ಷೀಣಿಸುತ್ತಿದೆ. ಆರ್ಥಿಕತೆಯನ್ನು ಉತ್ತಮ ಹಾದಿಯತ್ತ ಕೊಂಡೊಯ್ಯಬೇಕಾದರೆ, ಕಠಿಣ ಕ್ರಮಗಳ ಅಗತ್ಯವಿದೆ ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಈಗಾಗಲೇ ಎನ್ಎಸ್ಒ (ರಾಷ್ಟ್ರೀಯ ಅಂಕಿಅಂಶಗಳ ಕಚೇರಿ) ವರದಿಯನ್ನು ಬಿಡುಗಡೆ ಮಾಡಿದ್ದು, ವರದಿಯಲ್ಲಿ ಜಿಡಿಪಿ ಶೇ.4.5ಕ್ಕೆ ಕುಸಿದಿರುವುದು ಕಂಡು ಬಂದಿದೆ. ಕಳೆದ 6 ವರ್ಷಗಳಿಗೆ ಹೋಲಿಕೆ ಮಾಡಿದರೆ ಜಿಡಿಪಿ ಕಳಪೆ ಮಟ್ಟಕ್ಕೆ ಕುಸಿದಿದೆ. ಬಾಂಗ್ಲಾದೇಶದ ಜಿಡಿಪಿ ಮಟ್ಟವನ್ನೂ ನಾವು ಮುಟ್ಟಿಲ್ಲ. ಬಾಂಗ್ಲಾದೇಶದಲ್ಲಿ ಜಿಡಿಪಿ ಶೇ.7.5ರಷ್ಟಿದೆ ಎಂದು ತಿಳಿಸಿದ್ದಾರೆ.
ದೇಶದ ಆರ್ಥಿಕತೆ ಮಾತನಾಡಿದ ಅವರು, ಭಾರತೀಯ ಆರ್ಥಿಕತೆಗೆ ಕೈಗಾರಿಕೋದ್ಯಮ ಹಾಗೂ ವ್ಯಾಪಾರಿಗಳು ಮುಖ್ಯ ಪಾಲುದಾರರಾಗಿದ್ದಾರೆ. ಇದೀಗ ಅವರೇ ಸಂಕಷ್ಟವನ್ನು ಎದುರಿಸುವಂತಾಗಿದೆ ಎಂದಿದ್ದಾರೆ.
ಸರ್ಕಾರ ಸಮಸ್ಯೆ ಬಗೆಹರಿಸಲು ಆಗಿಂದಾಗಿಯೇ ಕ್ರಮಗಳನ್ನು ಕೈಗೊಂಡರೂ ಅದರಿಂದ ಪ್ರಯೋಜನವಾಗುತ್ತಿಲ್ಲ. ಹೀಗಾಗಿಯೇ ಉದ್ಯೋಗಾವಕಾಶ ಕೂಡ ಕ್ಷೀಣಿಸುತ್ತಿದೆ ಎಂದು ಹೇಳಿದ್ದಾರೆ.