ನವದೆಹಲಿ, ಡಿ.02(Daijiworld News/SS): ಟೆಲಿಕಾಂ ರಂಗದಲ್ಲಿ ತೀವ್ರ ಸ್ಪರ್ಧೆ ಮತ್ತು ವಿವಿಧ ಕಾರಣಗಳಿಂದ ಕಂಪನಿಗಳ ನಡುವೆ ಸಮರ ಶುರುವಾಗಿರುವ ಬೆನ್ನಲ್ಲೇ ದರ ಏರಿಕೆಯ ಸುದ್ದಿ ಕೇಳಿಬರುತ್ತಿದೆ. ಏರ್ಟೆಲ್ ಮತ್ತು ವೊಡಾಫೋನ್-ಐಡಿಯಾ ಕರೆ ದರ ದುಬಾರಿ ಸುದ್ದಿ ಬೆನ್ನಲ್ಲೇ, ರಿಲಯನ್ಸ್ ಜಿಯೋ ಕೂಡ ಕರೆ ದರ ಏರಿಕೆಯ ಸುಳಿವು ನೀಡಿದೆ. ಆರ್ಥಿಕ ಹಿಂಜರಿತದಿಂದ ತತ್ತರಿಸಿರುವ ಟೆಲಿಕಾಂ ಕಂಪೆನಿಗಳು ಇದೀಗ ತಮ್ಮ ಹೊರೆಯನ್ನು ಗ್ರಾಹಕರ ಮೇಲೆ ವರ್ಗಾಯಿಸಲು ಮುಂದಾಗಿವೆ.
ಹೀಗಾಗಿ ಗ್ರಾಹಕರಿಗೆ ಕರೆದರಗಳು ಮತ್ತು ವಿವಿಧ ಟ್ಯಾರಿಫ್ ಪ್ಲಾನ್ ದರ ಏರಿಕೆಯ ಬಿಸಿ ತಾಗಲಿದೆ. ದರ ಏರಿಕೆಯ ಕುರಿತು ಸುಳಿವು ನೀಡಿರುವ ರಿಲಯನ್ಸ್ ಜಿಯೋ, ಈಗಾಗಲೇ ಮುಂದಿನ ಕೆಲ ವಾರಗಳಲ್ಲಿ ದರ ಏರಿಕೆ ಮಾಡುವುದಾಗಿ ಹೇಳಿದೆ. ಡಿಸೆಂಬರ್ 6 ರಿಂದ ಹೊಸ ಅನಿಯಮಿತ ಯೋಜನೆಗಳನ್ನು ಪ್ರಾರಂಭಿಸುವುದಾಗಿ ಹೇಳಿರುವ ಮೊಬೈಲ್ ಸೇವಾ ಸಂಸ್ಥೆ ಇದೀಗ ಶುಲ್ಕ ಹೆಚ್ಚಳ ಮಾಡುವುದಾಗಿ ತಿಳಿಸಿದೆ.
ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಶಕೆ ಆರಂಭಿಸಿದ ರಿಲಯನ್ಸ್ ಜಿಯೋ ಡಿಸೆಂಬರ್ 6ರಿಂದ ಟ್ಯಾರಿಫ್ ಪ್ಲ್ಯಾನ್'ನಲ್ಲಿ ಶೇ.40ರಷ್ಟು ಶುಲ್ಕವನ್ನು ಹೆಚ್ಚಿಸುವುದಾಗಿ ಘೋಷಿಸಿದೆ. ಇದರೊಂದಿಗೆ ಆಲ್ ಇನ್ ಪ್ಲ್ಯಾನ್'ಗಳ ಮೂಲಕ ಗ್ರಾಹಕರಿಗೆ 300% ಕ್ಕಿಂತಲೂ ಹೆಚ್ಚಿನ ಪ್ರಯೋಜನಗಳನ್ನು ನೀಡಲಿದೆ ಎಂದು ರಿಯಲನ್ಸ್ ಹೇಳಿಕೊಂಡಿದೆ.
“ಜಿಯೋ ಸಂಸ್ಥೆಯು ಗ್ರಾಹಕರ ಹಿತಾಸಕ್ತಿಗೆ ಬದ್ಧವಾಗಿದ್ದು, ಭಾರತೀಯ ದೂರಸಂಪರ್ಕ ಉದ್ಯಮವನ್ನು ಉಳಿಸಿಕೊಳ್ಳಲು ಈ ಕ್ರಮ ತೆಗೆದುಕೊಳ್ಳುತ್ತಿದೆ” ಎಂದು ರಿಲಯನ್ಸ್ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.