ಮುಂಬೈ, ಡಿ 2 (Daijiworld News/MB) : 4 ವರ್ಷದ ಮಗುವಿನ ಮೇಲೆ ಅತ್ಯಾಚಾರ ಮಾಡಿದ ಆರೋಪಿಯನ್ನು ಊರಿನ ಬೀದಿಗಳಲ್ಲಿ ಬೆತ್ತಲೆ ಮೆರವಣಿಗೆ ಮಾಡಿ ನಂತರ ಪೊಲೀಸರಿಗೆ ಒಪ್ಪಿಸಿದ ಘಟನೆ ನಾಗ್ಪುರದ ಪರ್ದಿ ಪ್ರದೇಶದಲ್ಲಿ ನಡೆದಿದೆ.
ಆರೋಪಿ ಜವಾಹರ್ ವೈದ್ಯ(35) ಡಿಸೆಂಬರ್ 1 ರ ಭಾನುವಾರ ಸಂಜೆ ನಾಲ್ಕು ವರ್ಷದ ಬಾಲಕಿ ಮನೆಯಲ್ಲೇ ಅವಳ ಮೇಲೆ ಅತ್ಯಾಚಾರ ಮಾಡಿದ್ದು ಈ ಸಂದರ್ಭ ಸ್ಥಳೀಯರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದಿದ್ದಾನೆ. ಆರೋಪಿಗೆ ಶಿಕ್ಷೆ ನೀಡಬೇಕೆಂದು ನಿರ್ಧಾರ ಮಾಡಿದ ಸ್ಥಳೀಯರು ಆತನನ್ನು ಹಿಗ್ಗಮುಗ್ಗ ಥಳಿಸಿ ಆತನ ಕೈಗಳನ್ನು ಹಗ್ಗದಿಂದ ಕಟ್ಟಿ ಊರಿನಲ್ಲಿ ಬೆತ್ತಲೆ ಮೆರವಣಿಗೆ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿ ಜವಾಹರ್ ವೈದ್ಯ ಸಹಕಾರಿ ಸಂಘದ ಬ್ಯಾಂಕಿನಲ್ಲಿ ಹಣ ಸಂಗ್ರಹಿಸುವ ಕೆಲಸವನ್ನು ಮಾಡುತ್ತಿದ್ದು ಹಣ ಸಂಗ್ರಹ ಮಾಡಲು ಪ್ರತಿ ದಿನ ಈ ಮಗುವಿನ ಮನೆಗೆ ತೆರಳುತ್ತಿದ್ದ. ಭಾನುವಾರ ಸಂಜೆ ವೇಳೆ ಮನೆಯಲ್ಲಿ ಬಾಲಕಿ ಒಬ್ಬಳೇ ಇದ್ದದ್ದನ್ನು ಕಂಡು ಲೈಂಗಿಕ ದೌರ್ಜನ್ಯ ನಡೆಸಲು ಮುಂದಾಗಿದ್ದು ಈ ವೇಳೆ ಬಾಲಕಿಯ ತಾಯಿ ಮನೆಗೆ ಮರಳಿ ಸಹಾಯಕ್ಕೆ ಬರುವಂತೆ ಜೋರಾಗಿ ಕಿರುಚಿದ್ದಾರೆ. ಆಗ ನೆರೆಹೊರೆಯವರು ಸೇರಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ ಕಾಯ್ದೆ(ಪೊಕ್ಸೊ) ಹಾಗೂ ಐಪಿಸಿ ಸೆಕ್ಷನ್ನ ವಿವಿಧ ಕಾಯ್ದೆಗಳಡಿ ಪರ್ದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.