ಬೆಂಗಳೂರು, ಡಿ 2 (Daijiworld News/MB) : ಕೇಂದ್ರ ಸರ್ಕಾರದ ರೂ.40,000 ಕೋಟಿ ಅನುದಾನ ರಕ್ಷಣೆ ಮಾಡುವ ನಿಟ್ಟಿನಲ್ಲಿ ಮಹಾರಾಷ್ಟ್ರ ರಾಜ್ಯದಲ್ಲಿ ಸರ್ಕಾರ ರಚನೆ ಮಾಡುವ ನಾಟಕ ಮಾಡಲಾಯಿತು ಎಂದು ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆಯವರು ಹೇಳಿದ್ದಾರೆ.
ಉಪಚುನಾವಣೆಯ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಪ್ರಚಾರದ ವೇಳೆ "ಬಹುಮತ ಇಲ್ಲವೆಂದು ತಿಳಿದಿದ್ದರೂ ದೇವೇಂದ್ರ ಫಡ್ನವೀಸ್ ಅವರು ಪ್ರಮಾಣ ವಚನ ಸ್ವೀಕರಿಸಿದ್ದರು. ಏಕೆ ಎಂದು ನಿಮಗೆ ತಿಳಿದಿದೆಯಾ" ಎಂದು ಪ್ರಶ್ನಿಸಿದ ಅವರು " ಈ ಹಿಂದೆ ಕೇಂದ್ರ ಸರ್ಕಾರ ಮಹಾರಾಷ್ಟ್ರ ರಾಜ್ಯದ ಅಭಿವೃದ್ಧಿಗಾಗಿ ರೂ.40,000 ಕೋಟಿ ಅನುದಾನ ಬಿಡುಗಡೆ ಮಾಡಿದ್ದು ಈ ಹಣ ಮುಖ್ಯಮಂತ್ರಿಗಳ ನಿಯಂತ್ರಣಕ್ಕೆ ಬರುತ್ತದೆ. ಕಾಂಗ್ರೆಸ್, ಶಿವಸೇನೆ, ಎನ್'ಸಿಪಿ ಪಕ್ಷಗಳು ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಲು ಹೊರಟದ್ದು ಎಲ್ಲರಿಗೂ ತಿಳಿದಿತ್ತು. ಈ ಮೂರೂ ಪಕ್ಷಗಳು ಅಧಿಕಾರಕ್ಕೆ ಬಂದರೆ ಹಣ ದುರುಪಯೋಗವಾಗಬಹುದು ಎಂಬ ಉದ್ದೇಶದಿಂದ ಆ ಹಣವನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿಯೇ ದೇವೇಂದ್ರ ಫಡ್ನವೀಸ್ ಅವರು ಪ್ರಮಾಣವಚನ ಸ್ವೀಕರಿಸುವ ನಾಟಕವಾಡಿದ್ದರು ಎಂದು ತಿಳಿಸಿದ್ದಾರೆ.
ನಮಗೆ ಬಹುಮತ ಇಲ್ಲ ಎಂದು ತಿಳಿದಿತ್ತು ಆದರೂ ನಾವು ಸರ್ಕಾರ ರಚನೆ ಮಾಡುವ ನಾಟವಾಡಿದ್ದೆವು. ಕೇಂದ್ರ ಸರ್ಕಾರದ ರೂ.40,000 ಕೋಟಿ ರಕ್ಷಣೆ ಮಾಡುವ ಸಲುವಾಗಿ ಅಷ್ಟೇ ನಾವು ನಾಟಕ ಮಾಡಿದೆವು. ಎಲ್ಲವೂ ಪೂರ್ವ ನಿಯೋಜಿತವಾದ ನಾಟಕವಾಗಿತ್ತು. ಹಣ ಎಲ್ಲಿ ತಲುಪಬೇಕೋ ಅಲ್ಲಿಗೆ ತಲುಪಿದೆ. ಇಲ್ಲದೇ ಹೋಗಿದ್ದರೆ ಮುಂದೆ ಬರುತ್ತಿದ್ದ ಮುಖ್ಯಮಂತ್ರಿಗಳು ಅದನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಗಳಿರುತ್ತಿತ್ತು ಎಂದರು.