ಕೊಚ್ಚಿ, ಡಿ 2 (Daijiworld News/MB) : ಉಪ ಲೆಫ್ಟಿನೆಂಟ್ ಶಿವಾಂಗಿ ಭಾರತೀಯ ನೌಕಾಪಡೆಯ ಮಹಿಳಾ ಪೈಲಟ್ ಆಗಿ ಇಂದು ನೇಮಕವಾಗುವ ಮೂಲಕ ಭಾರತೀಯ ನೌಕಾಪಡೆಯ ಮೊದಲ ಮಹಿಳಾ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಬಿಹಾರದ ಮುಝಾಫರ್ ಪುರ್ ನಲ್ಲಿ ಜನಿಸಿರುವ ಶಿವಾಂಗಿ. ಪ್ರಾಥಮಿಕ ತರಬೇತಿಯ ನಂತರ 2018ರಲ್ಲಿ ಶಿವಾಂಗಿ ಭಾರತೀಯ ನೌಕಾಪಡೆಗೆ ಆಯ್ಕೆ ಮಾಡಲಾಗಿತ್ತು. ಸೋಮವಾರ ಕೊಚಿಯ ನೌಕಾ ನೆಲೆಗೆ ಶಿವಾಂಗಿ ಪೈಲಟ್ ಆಗಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ನನ್ನ ದೀರ್ಘಕಾಲದ ಕನಸು ಕೊನೆಗೂ ನನಸಾಗಿದೆ. ನಾನೀಗ ಮೊದಲ ಮಹಿಳಾ ಪೈಲಟ್ ಎಂಬುದು ದೊಡ್ಡ ಹೆಮ್ಮೆಯ ವಿಚಾರ. ನನ್ನ ಪೋಷಕರಿಗೆ ತುಂಬಾ ಖುಷಿಕೊಟ್ಟಿದೆ. ನನ್ನ ಮೂರನೇ ಹಂತದ ತರಬೇತಿಯನ್ನು ಪೂರ್ಣಗೊಳಿಸಲು ಎದುರು ನೋಡುತ್ತಿದ್ದೇನೆ ಎಂದು ಶಿವಾಂಗಿ ಹೇಳಿಕೆ ನೀಡಿರುವುದಾಗಿ ವರದಿ ತಿಳಿಸಿದೆ.
ನೌಕಾಪಡೆಯಲ್ಲಿ ಈಗಾಗಲೇ ಮಹಿಳೆಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಹಿಳೆ ಕಾಕ್ ಪಿಟ್ ನಲ್ಲಿ ಇಲ್ಲದಿರುವಾಗ ಆ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಉತ್ಸಾಹಿಗಳು ಇದ್ದೇ ಇರುತ್ತಾರೆ. ಆದರೆ ಇದು ಸ್ವಲ್ಪ ವಿಭಿನ್ನವಾದದ್ದು. ಇದೇ ಮೊದಲ ಬಾರಿಗೆ ಕಾಕ್ ಪಿಟ್ ನಲ್ಲಿ ಮಹಿಳೆ ಇರುವಂತಾಗಿದೆ. ಇದರಿಂದಾಗಿ ರಕ್ಷಣಾ ಕ್ಷೇತ್ರದಲ್ಲಿ ಬೇರೆ ಮಹಿಳೆಯರಿಗೂ ಹೆಚ್ಚಿನ ಅವಕಾಶ ಕಲ್ಪಿಸಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಮಹಿಳೆಯೂ ಕೂಡಾ ಹೆಲಿಕಾಪ್ಟರ್ ಮತ್ತು ಯುದ್ಧ ವಿಮಾನಗಳಲ್ಲಿಯೂ ತನ್ನ ಕರ್ತವ್ಯ ನಿರ್ವಹಿಸಲು ಆರಂಭವಾಗಬಹುದು ಎಂದು ಶಿವಾಂಗಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.