ನವದೆಹಲಿ, ಡಿ 3 (Daijiworld News/MB) : ರಾಜ್ಯಸಭೆಯಲ್ಲಿ ವಿಶೇಷ ಭದ್ರತಾ ಪಡೆ (ಎಸ್ಪಿಜಿ) ತಿದ್ದುಪಡಿ ಮಸೂದೆ ಮಂಗಳವಾರ ಅಂಗೀಕಾರವಾಗಿದ್ದು ಇನ್ನು ಮುಂದೆ ಪ್ರಧಾನಿ ಹಾಗೂ ಅಧಿಕೃತ ನಿವಾಸದಲ್ಲಿ ವಾಸಿಸುವ ಕುಟುಂಬಕ್ಕೆ ಮಾತ್ರ ಉನ್ನತ ಕಮಾಂಡೊಗಳ ಭದ್ರತೆ ದೊರಕಲಿದೆ.
ಈ ಮಸೂದೆ ಈಗಾಗಲೇ ಲೋಕಸಭೆಯಲ್ಲಿ ಅಂಗೀಕಾರವಾಗಿದ್ದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ರಾಜ್ಯಸಭೆಯಲ್ಲಿ ಮಂಡನೆ ಮಾಡಿದ್ದು ಕಾಂಗ್ರೆಸ್ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದಾಗ ಮಸೂದೆ ಮಂಡಿಸಿ ಮಾತಾನಾಡಿದ ಅಮಿತ್ ಶಾ ದೇಶದ ಪ್ರಧಾನಿಗೆ ಮಾತ್ರ ಈ ಸೌಲಭ್ಯ ಒದಗಿಸಲಾಗುವುದು. ಭದ್ರತೆ ಎಂದಿಗೂ ಪ್ರತಿಷ್ಠೆಯಾಗಬಾರದು. ಅಷ್ಟಕ್ಕೂ ಭದ್ರತೆಗೆ ಪಟ್ಟು ಹಿಡಿದಿರಲು ಕಾರಣವಾದರೂ ಏನು? ಎಂದು ಹೇಳಿ ಇದೇ ಮೊದಲ ಬಾರಿ ಎಸ್ಪಿಜಿ ಮಸೂದೆಗೆ ತಿದ್ದುಪಡಿ ತರಲಾಗುತ್ತಿಲ್ಲ. ಇದು ಐದನೇ ಬಾರಿ ತಿದ್ದುಪಡಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಹಾಗೆಯೇ ಈ ನಾಲ್ಕು ತಿದ್ದುಪಡಿಯನ್ನು ಗಾಂಧಿ ಕುಟುಂಬವನ್ನು ಗಮನದಲ್ಲಿ ಇಟ್ಟುಕೊಂಡು ಮಾಡಲಾಗಿದೆ. ಆದರೆ ನಾವು ಗಾಂಧಿ ಕುಟುಂಬವನ್ನು ವಿರೋಧವೇನು ಮಾಡುತ್ತಿಲ್ಲ. ನಾವು ಕುಟುಂಬ ರಾಜಕಾರಣವನ್ನು ವಿರೋಧ ಮಾಡುತ್ತಿದ್ದೇವೆ ಎಂದರು.
ಅಮಿತ್ ಶಾ ಉತ್ತರ ನೀಡಿದಾಗ ಆಕ್ರೋಶಗೊಂಡ ಕಾಂಗ್ರೆಸ್ ಸದಸ್ಯರು ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿ ರಾಜ್ಯಸಭೆ ಕಲಾಪವನ್ನು ಬಹಿಷ್ಕಾರ ಮಾಡಿ ಹೊರನಡೆದಿದ್ದು, ಕಾಂಗ್ರೆಸ್ ಸಂಸದರು ಹೊರನಡೆದ ಬಳಿಕ ಸದನದಲ್ಲಿ ಉಳಿದವರು ಈ ತಿದ್ದುಪಡಿಗೆ ಒಪ್ಪಿಗೆ ಸೂಚಿಸಿದ್ದು ತಿದ್ದುಪಡಿ ಅಂಗೀಕಾರವಾಗಿದೆ.
ಇತ್ತೀಚೆಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಪ್ರಿಯಾಂಕ ಗಾಂಧಿಗೆ ನೀಡಿದ್ದ ಎಸ್ಪಿಜಿ ಭದ್ರತೆಯನ್ನು ಹಿಂಪಡೆದು ಝೆಡ್ ಪ್ಲಸ್ ಭದ್ರತೆಯನ್ನು ಒದಗಿಸಲಾಗುವುದು ಎಂದು ಘೋಷಣೆ ಮಾಡಿತ್ತು. ಇದಕ್ಕೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿತ್ತು.