ನವದೆಹಲಿ, ಡಿ 4 (Daijiworld News/MSP): ಐಎನ್ಎಕ್ಸ್ ಮೀಡಿಯಾ ಹಗರಣದ ಪ್ರಕರಣಕ್ಕೆ ಸಂಬಂಧಪಟ್ಟಂತೆ, 105 ದಿನಗಳ ಕಾಲ ಜೈಲು ಶಿಕ್ಷೆ ಅನುಭವಿಸುತ್ತಿರುವ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಅವರಿಗೆ ಸುಪ್ರೀಂ ಕೋರ್ಟ್ ಬುಧವಾರ ಷರತ್ತು ಬದ್ದ ಜಾಮೀನು ಮಂಜೂರು ಮಾಡಿದೆ.
ನ್ಯಾಯಮೂರ್ತಿ ಆರ್. ಭಾನುಮತಿ ನೇತೃತ್ವದ ತ್ರಿಸದಸ್ಯ ಪೀಠ ಚಿದಂಬರಂ ಅವರಿಗೆ 105 ದಿನಗಳ ನಂತರ ಜಾಮೀನು ನೀಡಿದೆ. ಜಾಮೀನು ನೀಡುವ ಸಂದರ್ಭ ಯಾರಿಗೂ ಸಂದರ್ಶನ, ಸಾರ್ವಜನಿಕ ಹೇಳಿಕೆ ನೀಡಬಾರದು ಎಂದು ಸೂಚಿಸಿದ್ದು, ಪಾಸ್ ಪೋರ್ಟ್ ಅನ್ನು ವಶಕ್ಕೆ ನೀಡುವಂತೆ ಹೇಳಿದೆ. ಇಬ್ಬರ ಶ್ಯೂರಿಟಿ ಹಾಗೂ 2 ಲಕ್ಷ ರೂಪಾಯಿ ಠೇವಣಿ ಭದ್ರತೆ ನೀಡುವಂತೆ ಸುಪ್ರೀಂ ಸೂಚಿಸಿದೆ. ಪ್ರಕರಣದ ಸಾಕ್ಷಿಗಳ ಮೇಲೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪ್ರಭಾವ ಬೀರಬಾರದು ಎಂದು ನಿರ್ದೇಶನ ನೀಡಿದೆ.
ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಚಿದಂಬರಂ ಪ್ರಮುಖ ಪಾತ್ರವಹಿಸಿದ್ದು, ಅವರಿಗೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ನವೆಂಬರ್ 15ರಂದು ಚಿದಂಬರಂ ಅರ್ಜಿ ವಿಚಾರಣೆ ನಡೆಸಿದ್ದ ದೆಹಲಿ ಹೈಕೋರ್ಟ್ ಜಾಮೀನು ನಿರಾಕರಿಸಿತ್ತು. ಕಳೆದ ಆಗಸ್ಟ್ 21 ರಂದು ಸಿಬಿಐ ಚಿದಂಬರಂ ಅವರನ್ನು ಬಂಧಿಸಿಸಲಾಗಿತ್ತು