ನವದೆಹಲಿ, ಡಿ 4 (Daijiworld News/MSP): ಪೆಟ್ರೋಲ್- ಡೀಸೆಲ್ ಮೇಲಿನ ತೆರಿಗೆ ಇಳಿಸುವ ಪ್ರಸ್ತಾವ ಕೇಂದ್ರ ಸರ್ಕಾರದ ಮುಂದಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಲೋಕಸಭೆಯಲ್ಲಿ ಹೇಳಿದ್ದಾರೆ.
ಪೆಟ್ರೋಲ್ - ಡೀಸೆಲ್ ಮೇಲಿನ ಜಿಎಸ್ ಟಿ ವ್ಯಾಪ್ತಿಗೆ ತರಬಹುದೇ, ತೈಲ ಮೇಲಿನ ತೆರಿಗೆ ಇಳಿಸುವ ಪ್ರಸ್ತಾವ ಸರ್ಕಾರಕ್ಕೆ ಇದೆಯಾ? ಎಂಬ ಪ್ರಶ್ನೆಗೆ ಉತ್ತರಿಸಿರುವ ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿ, ಪೆಟ್ರೋಲ್ ಅಥವಾ ಡೀಸೆಲ್ ಮೇಲೆ ತೆರಿಗೆ ಇಳಿಸುವುದಿಲ್ಲ. ಆದರೆ ಅದರ ಮೇಲೆ ಯಾವುದೇ ಹೊಸ ತೆರಿಗೆ ಹಾಕುವುದಿಲ್ಲ ಎಂದಿದ್ದಾರೆ. ಜಿಎಸ್ ಟಿ ವ್ಯಾಪ್ತಿಗೆ ತರುವ ಬಗ್ಗೆ ಉತ್ತರಿಸಿದ ಅವರು ಇದು ಇನ್ನೂ ಚರ್ಚೆ ಹಾದಿಯಲ್ಲಿದೆ. ಜಿಎಸ್ ಟಿಯ ಶೂನ್ಯ ದರದ ವಿಭಾಗದಲ್ಲಿದೆ. ಜಿಎಸ್ ಟಿ ಕೌನ್ಸಿಲ್ ಈ ಬಗ್ಗೆ ತೀರ್ಮಾನ ಮಾಡಲಿದೆ ಎಂದಿದ್ದಾರೆ.
ಜಗತ್ತಿನ ಎಲ್ಲೂ ಪೆಟ್ರೋಲ್- ಡೀಸೆಲ್ ಬೆಲೆ ನಿರ್ದಿಷ್ಟ ಅವಧಿಯವರೆಗೆ ಸ್ಥಿರವಾಗಿ ಇರುವುದಿಲ್ಲ ಎಂದು ತಿಳಿಸಿದ್ದಾರೆ. ಭಾರತದಲ್ಲಿ ಮಾರಾಟವಾಗುವ ತೈಲದ ಮೇಲೆ ಕೇಂದ್ರ ಸರ್ಕಾರವು ಕೇಂದ್ರ ಅಬಕಾರಿ ಮತ್ತು ಸೀಮಾ ಸುಂಕ ವಿಧಿಸುತ್ತದೆ. ಅದರ ಜತೆಗೆ ರಾಜ್ಯ ಸರ್ಕಾರದಿಂದಲೂ ತೆರಿಗೆ ಹಾಕಲಾಗುತ್ತದೆ ಎಂದಿದ್ದಾರೆ.