ಹೈದರಾಬಾದ್, ಡಿ 4 (Daijiworld News/ MB) : ಮಹಿಳಾ ಟೆಕ್ಕಿಯು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಮಂಗಳವಾರ ಇಲ್ಲಿನ ಸನತ್ನಗರದಲ್ಲಿ ನಡೆದಿದೆ.
ಶವವಾಗಿ ಪತ್ತೆಯಾದ ಮಹಿಳೆಯನ್ನು ಪೂರ್ಣಿಮಾ ಎಂದು ಗುರುತಿಸಲಾಗಿದ್ದು ಅವರು 20 ದಿನಗಳ ಹಿಂದೆ ಕಾರ್ತಿಕ್ ಎಂಬವರನ್ನು ಮದುವೆಯಾಗಿದ್ದರು. ಇಬ್ಬರೂ ಒಂದು ವರ್ಷದಿಂದ ಪ್ರೀತಿಸುತ್ತಿದ್ದು 20 ದಿನಗಳ ಹಿಂದಷ್ಟೆ ಪೋಷಕರ ವಿರೋಧದ ನಡುವೆಯೇ ವಿವಾಹವಾಗಿದ್ದಾರೆ. ಕಾರ್ತಿಕ್ ಕೂಡಾ ಟೆಕ್ಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮಂಗಳವಾರ ಪೂರ್ಣಿಮಾ ತನ್ನ ಮನೆಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ನೇಣು ಬಿಗಿದ ಸ್ಥಿತಿಯಲ್ಲಿ ಆಕೆಯ ಮೃತದೇಹ ಪತ್ತೆಯಾಗಿದೆ.
ಈ ಘಟನೆಯ ಕುರಿತು ಮೃತ ಮಹಿಳೆಯ ಪೋಷಕರು ಮಹಿಳೆಯ ಪತಿಯ ಮೇಲೆ ಅನುಮಾನ ವ್ಯಕ್ತಪಡಿಸಿದ್ದು ಪತಿ ಕಾರ್ತಿಕ್ ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾನೆ ಎಂದು ಆರೋಪ ಮಾಡಿದ್ದಾರೆ. ಈ ಕುರಿತು ಸನತ್ನಗರ ಪೊಲೀಸ್ ಠಾಣೆ ಮುಂದೆ ಕುಳಿತು ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದ್ದು ಈ ಪ್ರಕರಣಕ್ಕೆ ಸಂಬಂಧಿಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.