ಬೆಂಗಳೂರು, ಡಿ 4 (Daijiworld News/ MB) : ದಲಿತರ ಮೇಲೆ ನಡೆಯುವ ದೌರ್ಜನ್ಯ ಹಾಗೂ ಸಾಮಾಜಿಕ ಬಹಿಷ್ಕಾರ ಪ್ರಕರಣಗಳ ಕುರಿತು ರಾಜ್ಯ ಸರಕಾರ ನಿರ್ಲಕ್ಷ್ಯ ಮಾಡಿದೆ ಎಂದು ಆರೋಪಿಸಿ ದಸಂಸ ಕಾರ್ಯಕರ್ತರು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಆರೋಗ್ಯ ಸಚಿವ ಶ್ರೀರಾಮುಲು ನಿವಾಸಕ್ಕೆ ಮುತ್ತಿಗೆ ಹಾಕಿದರು.
ದಸಂಸ ರಾಜ್ಯಾಧ್ಯಕ್ಷ ಟಿ.ಡಿ.ರಾಜಗಿರಿ ನೇತೃತ್ವದಲ್ಲಿ ಬುಧವಾರ ಗೋವಿಂದ ಕಾರಜೋಳ ಅವರ ನಿವಾಸಕ್ಕೆ ಮುತ್ತಿಗೆ ಹಾಕಿದ ದಸಂಸ ಕಾರ್ಯಕರ್ತರು ದಲಿತರ ಮೇಲೆ ನಡೆಯುವ ದೌರ್ಜನ್ಯವನ್ನು ರಾಜ್ಯ ಸರಕಾರ ನಿರ್ಲಕ್ಷ್ಯ ಮಾಡುವುದನ್ನು ಖಂಡಿಸಿ ಘೋಷಣೆ ಕೂಗಿದರು.
ದೌರ್ಜನ್ಯ ನಿಷೇಧ ಕಾಯ್ದೆಯಡಿ ಕೂಡಲೇ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ದೊಡ್ಡಘಟ್ಟ ಹಾಘೂ ಜಂತಿಕೊಳಲು ಗ್ರಾಮದ ದಲಿತರ ಮೇಲೆ ನಡೆದ ದೌರ್ಜನ್ಯ ಹಾಗೂ ಸಾಮಾಜಿಕ ಬಹಿಷ್ಕಾರ ಕೃತ್ಯದಿಂದ ನೊಂದಿರುವವರಿಗೆ ಸೌಲಭ್ಯ ಒದಗಿಸಬೇಕು ಎಂದು ಆಗ್ರಹ ಮಾಡಿದರು.
ಗೂಂಡಾ ಕಾಯ್ದೆಯಡಿ ಸಾಮಾಜಿಕವಾಗಿ ಬಹಿಷ್ಕಾರಕ್ಕೆ ಒಳಗಾದ ದಲಿತರ ಪರ ಹೋರಾಟಗಾರರ ಮೇಲೆ ಮೊಕದಮೆ ದಾಖಲು ಮಾಡಿದ್ದು ಆ ಕೇಸುಗಳನ್ನು ಕೂಡಲೇ ವಜಾ ಮಾಡಬೇಕು. ಹಾಗೆಯೇ ದೌರ್ಜನ್ಯ ಕಾಯ್ದೆಯಡಿ ಕೆಸು ದಾಖಲಾಗುತ್ತಿದ್ದಂತೆ ಪ್ರತಿಯಾಗಿ ಕೇಸು ಹಾಕುವುದನ್ನು ತಡೆಯಲು ಕಾನೂನು ತಿದ್ದುಪಡಿ ತರಬೇಕು ಎಂದು ಒತ್ತಾಯ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಹೊಸದುರ್ಗ ತಾಲೂಕಿನ ದೊಡ್ಡಘಟ್ಟ ಹಾಘೂ ಜಂತಿಕೊಳಲು ಗ್ರಾಮದ ದಲಿತರ ಮೇಲೆ ನಡೆದ ದೌರ್ಜನ್ಯ ಪ್ರಕರನಕ್ಕೆ ಸಂಬಂಧಿಸಿ ಅಧಿಕಾರಿಗಳಿಮದ ಮಾಹಿತಿ ಪಡೆದು ಪರಿಹಾರಕ್ಕಾಗಿ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಕಾರಣದಿಂದಾಗಿ ಅನಿರ್ದಿಷ್ಟಾವಧಿ ಸತ್ಯಾಗ್ರಹವನ್ನು ಹಿಂಪಡೆಯಲಾಗಿದೆ ಎಂದು ದಸಂಸ ರಾಜ್ಯಧ್ಯಕ್ಷ ರಾಜಗಿರಿ ತಿಳಿಸಿದ್ದಾರೆ.