ನವದೆಹಲಿ, ಡಿ 05 (Daijiworld News/MB): ಲೋಕ ಸಭೆಯಲ್ಲಿ ಈರುಳ್ಳಿ ಬೆಲೆ ಏರಿಕೆಗೆ ಸಂಬಂಧ ಪಟ್ಟು ಚರ್ಚೆ ನಡೆಯುತ್ತಿರುವಾಗ ಸಂದರ್ಭದಲ್ಲಿ " ನಾನು ಈರುಳ್ಳಿ ಬೆಳುಳ್ಳಿ ತಿನ್ನದ ಕುಟುಂಬಕ್ಕೆ ಸೇರಿದವಳು, ಹೀಗಾಗಿ ಬೆಲೆ ಏರಿಕೆಯ ಚಿಂತೆ ನನಗಿಲ್ಲ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಕೇಂದ್ರ ಸರ್ಕಾರ ಈರುಳ್ಳಿ ಬೆಲೆ ಏರಿಕೆ ತಗ್ಗಿಸುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಂಡಿದ್ದು ಅಡುಗೆ ಪದಾರ್ಥಗಳನ್ನು ದೀರ್ಘಕಾಲದವರೆಗೆ ಸಂಗ್ರಹಿಸಿಡಲು ತಂತ್ರಜ್ಞಾನ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಪ್ರತಿಪಕ್ಷಗಳು ಬೆಲೆ ಏರಿಕೆ, ಆರ್ಥಿಕ ಹಿಂಜರಿತ, ತೀವ್ರ ಹಣದುಬ್ಬರದಿಂದ ದೇಶದಲ್ಲಿ ಹೂಡಿಕೆ ಮಾಡಿದವರಿಗೆ ಭೀತಿ ಉಂಟಾಗಿದೆ ಎಂದು ಹೇಳಿದ್ದು ಇದನ್ನು ಅಲ್ಲಗಳೆದ ಸಚಿವೆ ವಿದೇಶಿ ನೇರ ಹೂಡಿಕೆ ಈ ವರ್ಷದ ಮೊದಲಾರ್ಧದಲ್ಲಿ 17 ಬಿಲಿಯನ್ ಡಾಲರ್ ನಿಂದ 209 ಬಿಲಿಯನ್ ಡಾಲರ್ ಗೆ ಏರಿಕೆಯಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ಬುಧವಾರ ಲೋಕಸಭೆಯಲ್ಲಿ ಅನುದಾನಕ್ಕಾಗಿ ಪೂರಕ ಬೇಡಿಕೆಗಳ ಮೊದಲ ಭಾಗದ ಮೇಲಿನ ಚರ್ಚೆಗೆ ಉತ್ತರಿಸಿದ ಅವರು, ಈರುಳ್ಳಿ ಬೆಲೆ ಏರಿಕೆ ತಡೆಯಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದು ಇದಕ್ಕೆ ಸಂಬಂಧಿಸಿ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಈರುಳ್ಳಿ ಬೆಲೆಯು 2014ರಿಂದ ಏರಿಳಿತವಾಗುತ್ತಲೇ ಇದ್ದು ಹೆಚ್ಚುವರಿ ಬೆಳೆಯಾದ ಸಂದರ್ಭದಲ್ಲಿ ಸರ್ಕಾರ ರಫ್ತಿಗೆ ಬೆಂಬಲವನ್ನು ನೀಡಿದೆ. ರಫ್ತಿಗೆ ಶೇಕಡಾ 5ರಿಂದ 7ರಷ್ಟು ಸಹಾಯ ಮಾಡಲಾಗಿದೆ. ಸರಿಯಾದ ಸುಧಾರಿತ ಅತ್ಯಾಧುನಿಕ ಸಂಗ್ರಾಹಕ ವ್ಯವಸ್ಥೆ ನಮ್ಮಲ್ಲಿಲ್ಲ, ವೈಜ್ಞಾನಿಕ ವ್ಯವಸ್ಥೆಯಿಲ್ಲ. ಈ ಕಾರಣದಿಂದಾಗಿ ದೀರ್ಘಕಾಲದವರೆಗೆ ಸಂಗ್ರಹ ಮಾಡಿಡಲು ತೊಂದರೆ ಉಂಟಾಗುತ್ತಿದೆ ಎಂದರು.