ಬೆಂಗಳೂರು, ಡಿ 05 (Daijiworld News/MB): ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ್ದ ಬಿಬಿಎಂಪಿ ಕಾರ್ಪೊರೇಟರ್ ವಸಂತ್ಕುಮಾರ್ ಉಪಚುನಾವಣೆಯ ದಿನ ಮತ್ತೆ ಕಾಂಗ್ರೆಸ್ಗೆ ವಾಪಾಸ್ಸಾಗಿದ್ದಾರೆ.
ತಾವು ಮಾತೃ ಪಕ್ಷಕ್ಕೆ ವಾಪಾಸ್ಸಾದ ಕುರಿತು ಮಾತಾನಾಡಿದ ಅವರು, ಬಿಜೆಪಿಯವರು ನನ್ನನ್ನು ಕಾಫಿ ಕುಡಿಯಲು ಎಂದು ಕರೆಸುಕೊಮಡು ಹೋಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಮಾಡಿದ್ದಾರೆ. ಆ ಸಮಯದಲ್ಲಿ ಏನು ಮಾಡಲಿ ಎಂದು ನನಗೆ ತಿಳಿಯಲಿಲ್ಲ. ನನ್ನಿಂದ ತಪ್ಪು ನಡೆದಿದೆ. ಈಗ ಅಧ್ಯಕ್ಷರಿಗೆ ಈ ಕುರಿತು ತಿಳಿಸಿ ಪಕ್ಷಕ್ಕೆ ವಾಪಾಸ್ ಬಂದಿದ್ದೇನೆ ಎಂದು ಹೇಳಿ ಕ್ಷಮೆ ಕೇಳಿದ್ದಾರೆ.
ನನ್ನ ಕುರಿತು ತಪ್ಪು ಮಾಹಿತಿ ಪ್ರಚಾರ ಮಾಡಲಾಗುತ್ತಿದೆ. ನಾನು ಹಣ ಪಡೆದು ಬಿಜೆಪಿಗೆ ಸೇರಿ ಆಮೇಲೆ ಹಣ ಪಡೆದು ಕಾಂಗ್ರೆಸ್ಗೆ ಬಂದಿದ್ದೇನೆ ಎಂಬುದು ಸುಳ್ಳು ಮಾಹಿತಿ ಎಂದು ಸ್ಪಷ್ಟನೆ ನೀಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಬಿಜೆಪಿಯವರು ಈ ರೀತಿ ಕೀಳು ಮಟ್ಟಕ್ಕೆ ಇಳಿದಿರುವುದನ್ನು ನಾನು ಖಂಡಿಸುತ್ತೇನೆ. ಅವರು ಶಿವಾಜಿನಗರ ಕ್ಷೇತ್ರದಲ್ಲಿ ಸೋಲುವ ಭಯದಿಂದ ಈ ರೀತಿ ಮಾಡಿದ್ದಾರೆ. ಗೆಲ್ಲಲು ವಾಮ ಮಾರ್ಗ ಅನುಸರಿಸುತ್ತಿದ್ದಾರೆ. ಅವರು ವಸಂತ್ ಅವರ ಮೇಲೆ ಒತ್ತಡ ಹೇರಿ ಕರೆದುಕೊಂಡು ಹೋಗಿದ್ದು ಈಗ ವಸಂತ್ ಮತ್ತೆ ಪಕ್ಷಕ್ಕೆ ವಾಪಸ್ಸಾಗಿದ್ದಾರೆ. ಇದು ಬಿಜೆಪಿಯ ಹಳೇ ಚಾಳಿ. ಅವರು ಕುದುರೆ ವ್ಯಾಪಾರ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.