ಬೆಂಗಳೂರು, ಡಿ 05 (DaijiworldNews/SM): ರಾಜ್ಯ ರಾಜಕೀಯದ ಬೆಳವಣಿಗೆಗಳು ದಿನಕ್ಕೊಂದರಂತೆ ಕುತೂಹಲದ ಘಟ್ಟವನ್ನು ತಲುಪುತ್ತಿವೆ. ಇದೀಗ ಹದಿನೈದು ಕ್ಷೇತ್ರಗಳಿಗೆ ಬೈ ಎಲೆಕ್ಷನ್ ನಡೆದಿದ್ದು, ಇವುಗಳ ಪೈಕಿ ಬಿಜೆಪಿ ಮೇಲುಗೈ ಸಾಧಿಸಲಿದೆ ಎಂಬುವುದು ಚುನಾವಣೋತ್ತರ ಸಮೀಕ್ಷೆಯಾಗಿದೆ.
ಸದ್ಯಕ್ಕೆ ಹೊರ ಬಿದ್ದಿರುವ ಚುನಾವಣೋತ್ತರ ಸಮೀಕ್ಷೆ ಪ್ರಕಾರ ಬಿಎಸ್ ವೈ ನೇತೃತ್ವದ ಬಿಜೆಪಿ ಸರಕಾರ ಸೇಫ್ ಆಗಿರಲಿದೆ. 15 ವಿಧಾನಸಭೆಗಳಿಗೆ ಗುರುವಾರದಂದು ಶಾಂತಿಯುತ ಮತದಾನ ನಡೆದಿದೆ. ಅನರ್ಹ ಶಾಸಕರು ಬಿಜೆಪಿ ಪಕ್ಷದಿಂದ ಟಿಕೆಟ್ ಪಡೆದುಕೊಂಡು ಸ್ಪರ್ಧಿಸಿದ್ದಾರೆ. ಹಾಗೂ ಬಿಜೆಪಿ ಪಕ್ಷಕ್ಕೆ ಇವರ ಗೆಲುವು ಅನಿವಾರ್ಯವಾಗಿದೆ. ಸರಕಾರದ ಅಳಿವು ಉಳಿವು ಈ ಅಭ್ಯರ್ಥಿಗಳ ಗೆಲುವು ಸೋಲಿನ ಮೇಲೆ ಅವಲಂಬಿತವಾಗಿದೆ.
ಅನರ್ಹರ ಗೆಲುವಿನ ಹಾದಿ ಕಠಿಣವಾಗಿದೆ ಎಂದು ಈ ಹಿಂದೆ ಹಲವು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ಇಂದು ಆ ಎಲ್ಲಾ ಲೆಕ್ಕಾಚಾರವನ್ನು ಸಿಓಟರ್ ಸಮೀಕ್ಷೆ ಬುಡಮೇಲು ಮಾಡಿದೆ.
ಚುನಾವಣೋತ್ತರ ಸಮೀಕ್ಷೆ ಪ್ರಕಾರ, ಬಿಜೆಪಿ ಪಕ್ಷ ಸುಮಾರು 9ರಿಂದ 12, ಕಾಂಗ್ರೆಸ್ ಪಕ್ಷ 3ರಿಂದ 6 ಮತ್ತು ಜೆಡಿಎಸ್ ಒಂದು ಸ್ಥಾನದಲ್ಲಿ ಮುನ್ನಡೆ ಸಾಧಿಸಲಿದೆ ಎಂದಿದೆ. ಸದ್ಯದ ಸಮೀಕ್ಷೆ ಹೇಳುವಂತೆ ಬಿಎಸ್ ವೈ ನೇತೃತ್ವದ ಸರಕಾರ ತೂಗುಗತ್ತಿಯಿಂದ ಸೇಫ್ ಝೋನ್ ಗೆ ತಲುಪಿದೆ. ಆದರೆ, ಫಲಿತಾಂಶ ಇದೇ ರೀತಿ ಬರಬಹುದೆಂದು ನಿಖರವಾಗಿ ಹೇಳಲು ಅಸಾಧ್ಯವಾಗಿದ್ದು, ಮತ ಎಣಿಕೆಯಂದು ಡಿಸೆಂಬರ್ ಒಂಬತ್ತರಂದು ಸರಕಾರದ ಅಳಿವು-ಉಳಿವಿಗೆ ಸ್ಪಷ್ಟ ಉತ್ತರ ಸಿಗಲಿದೆ.