ನವದೆಹಲಿ, ಡಿ 06 (DaijiworldNews/SM): ಪಶುವೈದ್ಯೆ ಡಾ. ಪ್ರಿಯಾಂಕಾ ರೆಡ್ಡಿ ಮೇಲೆ ಅತ್ಯಾಚಾರ ಎಸಗಿ ಬಳಿಕ ಅವರನ್ನು ಹತ್ಯೆಗೈದ ಆರೋಪಿಗಳನ್ನು ಅದೇ ಜಾಗದಲ್ಲಿ ಶುಕ್ರವಾರ ಬೆಳಗ್ಗಿನ ಜಾವ ಪೊಲೀಸರು ಎನ್ ಕೌಂಟರ್ ಮಾಡಿದ್ದಾರೆ. ಇದರ ಬೆನ್ನಲ್ಲೇ ನಿರ್ಭಯಾ ಅತ್ಯಾಚಾರ ಆರೋಪಿಗಳಿಗೆ ಕ್ಷಮಾದಾನ ನೀಡದಂತೆ ರಾಷ್ಟ್ರಪತಿಗಳಿಗೆ ಕೇಂದ್ರ ಗೃಹ ಸಚಿವಾಲಯ ಶಿಫಾರಸ್ಸು ಸಲ್ಲಿಸಿದೆ.
ಕೇಂದ್ರ ಗೃಹ ಸಚಿವಾಲಯ ರಾಷ್ಟ್ರಪತಿ ರಮಾನಾಥ ಕೋವಿಂದ್ ಅವರಿಗೆ ಶಿಫಾರಸು ಮಾಡಿದ್ದು, ಈಗಾಗಲೇ ಗಲ್ಲು ಶಿಕ್ಷೆಗೆ ಗುರುಯಾಗಿರುವ ಆರೋಪಿಗಳು ಸಲ್ಲಿಸಿರುವ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸುವಂತೆ ಸೂಚನೆ ನೀಡಿದೆ.
ಇನ್ನು ನಿರ್ಭಯಾ ಹತ್ಯಾಚಾರ ಪ್ರಕರಣದ ಪ್ರಮುಖ ಅಪರಾಧಿ ವಿನಯ್ ಶರ್ಮಾ ಗಲ್ಲು ಶಿಕ್ಷೆಗೆ ಗುರಿಯಾಗಿದ್ದಾನೆ. ಆತ ಕ್ಷಮಾದಾನ ಕೋರಿ ರಾಷ್ಟ್ರಪತಿಗಳಿಗೆ ಅರ್ಜಿ ಸಲ್ಲಿಸಿದ್ದಾನೆ. ಅದನ್ನು ತಿರಸ್ಕರಿಸುವಂತೆ ಕೇಂದ್ರ ಗೃಹ ಸಚಿವಾಲಯ ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಿದೆ.
2012ರ ಡಿಸೆಂಬರ್ 16ರಂದು ರಾತ್ರಿ ವೇಳೆ ತನ್ನ ಸ್ನೇಹಿತನೊಂದಿಗೆ ಬಸ್ನಲ್ಲಿ ಪ್ರಯಾಣಿಸುತ್ತಿದ್ದ 23 ವರ್ಷದ ಯುವತಿಯ ಮೇಲೆ ಅಪ್ರಾಪ್ತ ವಯಸ್ಸಿನ ಬಾಲಕ ಸೇರಿದಂತೆ ಒಟ್ಟು ಆರು ಮಂದಿ ಅಮಾನುಷವಾಗಿ ಅತ್ಯಾಚಾರ ಎಸಗಿದ್ದರು. ಈ ಘೋರ ಕೃತ್ಯದಿಂದ ಸಾವು-ಬದುಕಿನ ಹೋರಾಟ ನಡೆಸುತ್ತಿದ್ದ ನಿರ್ಭಯಾ ಚಿಕಿತ್ಸೆ ಫಲಕಾರಿಯಾಗದೆ ಡಿ. 29ರಂದು ಸಿಂಗಾಪುರದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು.