ತಿರುವನಂತಪುರಂ, ಡಿ 06 (DaijiworldNews/SM): ಇತ್ತೀಚಿನ ದಿನಗಳಲ್ಲಿ ದೇಶದೆಲ್ಲೆಡೆ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ. ಈ ನಡುವೆ ವಿದ್ಯಾರ್ಥಿನಿಯೊಬ್ಬಳಿಗೆ ರಾತ್ರಿ ವೇಳೆಯಲ್ಲಿ ಬಸ್ ನಿಲ್ದಾಣದಲ್ಲಿ ಕೆ ಎಸ್ ಆರ್ ಟಿ ಸಿ ಬಸ್ ಚಾಲಕ ಹಾಗೂ ನಿರ್ವಾಹಕ ಆಕೆಯ ಸುರಕ್ಷತೆಗಾಗಿ ಕಾದು ಕುಳಿತ ಘಟನೆಯೊಂದು ತಿರುವನಂತಪುರಂನಲ್ಲಿ ನಡೆದಿದೆ. ಆ ಮೂಲಕ ಚಾಲಕ ಹಾಗೂ ನಿರ್ವಾಹಕರ ಮಾನವೀಯ ಕಾರ್ಯಕ್ಕೆ ಸಾಮಾಜಿಕ ಜಾಲ ತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಕೇರಳ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಸ್ ಕಂಡಕ್ಟರ್ ಪಿ. ಶಜುದ್ದೀನ್ ಮತ್ತು ಡ್ರೈವರ್ ಡೆನ್ನಿಸ್ ಕ್ಸೇವಿಯರ್ ವಿದ್ಯಾರ್ಥಿನಿಯ ಸುರಕ್ಷತೆಗೆ ಕಾದುಕುಳಿತವರಾಗಿದ್ದಾರೆ. ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ ಎಂಫಿಲ್ ಓದುತ್ತಿರುವ ಕೇರಳದ ಕಣ್ಣೂರಿನ ವಿದ್ಯಾರ್ಥಿ ಎಲ್ಸಿನಾ ತನ್ನ ಸಂಶೋಧನೆ ಕೆಲಸದ ನಿಮಿತ್ತ ಕಳೆದ ಮಂಗಳವಾರ ಸರ್ಕಾರಿ ಬಸ್ ನಲ್ಲಿ ಕೊಟ್ಟಾಯಂ ಜಿಲ್ಲೆಯ ಪೊಡಿಮಟ್ಟಂಗೆ ತೆರಳಿದ್ದಾಳೆ.
ತನ್ನ ಸಂಶೋಧನೆ ಮುಗಿಸಿ ಪೊಡಿಮಟ್ಟಂ ಹತ್ತಿರದ ಕಂಜರಪಲ್ಲಿ ಬಸ್ ನಿಲ್ದಾಣಕ್ಕೆ ತಲುಪುವಾಗ ರಾತ್ರಿ 11 ಗಂಟೆಯಾಗಿದತ್ತು. ಈ ನಡುವೆ ಆ ದಿನ ವ್ಯಾಪಾರಿಗಳು ಮುಷ್ಕರ ನಡೆಸಿದ್ದರು. ಇದರಿಂದಾಗಿ ಅಲ್ಲಿ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಇದರಿಂದ ನಡುರಾತ್ರಿಯ ಸಮಯದಲ್ಲಿ ಅಲ್ಲಿ ವಿದ್ಯಾರ್ಥಿನಿಯೊಬ್ಬಳೇ ಇರಬೇಕಾಗಿತ್ತು. ಇದನ್ನು ಅರಿತ ಬಸ್ ಕಂಡಕ್ಟರ್ ಹಾಗೂ ಚಾಲಕ ಆ ಬಸ್ ನಿಲ್ದಾಣದಲ್ಲಿ ಕಾದುಕುಳಿತಿದ್ದಾರೆ. ಎನ್ಸಿಲಾರ ಸಂಬಧಿಕರು ಬರುವ ತನಕ ಅಲ್ಲೇ ಬಸ್ ನಿಲ್ಲಿಸಿದ್ದಾರೆ. ಇನ್ನು ಇವರ ಮಾನವೀಯ ಕಾರ್ಯಕ್ಕೆ ಬಸ್ ನಲ್ಲಿದ್ದ ಸಹ ಪ್ರಯಾಣಿಕರು ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ.
ತುಸು ಹೊತ್ತಿನ ಬಳಿಕ ವಿದ್ಯಾರ್ಥಿನಿಯ ಸಂಬಂಧಿಯೊಬ್ಬರು ಕಾರಿನಲ್ಲಿ ಬಂದು ಆಕೆಯನ್ನು ಕರೆದುಕೊಂಡು ತೆರಳಿದ್ದಾನೆ. ಈ ನಡುವೆ ಅರ್ಧರಾತ್ರಿಯ ಸಮಯದಲ್ಲಿ ವಿದ್ಯಾರ್ಥಿನಿಯೊಬ್ಬಳನ್ನೇ ಬಸ್ ನಿಲ್ದಾಣದಲ್ಲಿ ಇಳಿಸಿ ತೆರಳದೆ, ಕೆ ಎಸ್ ಆರ್ ಟಿಸಿ ಬಸ್ ಚಾಲಕ ಹಾಗೂ ನಿರ್ವಾಹಕ ಮಾನವೀಯತೆ, ಹೃದಯ ವೈಶಲ್ಯತನ ಮೆರೆದಿದ್ದು, ಇವರ ಈ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹಾಗೂ ಸಹಪ್ರಯಾಣಿಕರ ತಾಳ್ಮೆಯ ವರ್ತನೆಗೆ ಸಾರ್ವಜನಿಕ ವಲಯದಿಂದ ಸಹಭಾಶ್ ಗಿರಿ ವ್ಯಕ್ತವಾಗುತ್ತಿದೆ.