ಹೈದರಾಬಾದ್, ಡಿ 07 (Daijiworld News/MB): ತಮ್ಮ ಸ್ವ ರಕ್ಷಣೆಗಾಗಿ ಪಶುವೈದ್ಯೆ ಮೇಲೆ ಅತ್ಯಾಚಾರ ಹಾಗೂ ಹತ್ಯೆ ಮಾಡಿದ ನಾಲ್ವರು ಆರೋಪಿಗಳನ್ನು ಎನ್ಕೌಂಟರ್ ಮೂಲಕ ಹತ್ಯೆ ಮಾಡಲಾಯಿತು ಎಂದು ಸೈಬರಾಬಾದ್ ಪೊಲೀಸ್ ಆಯುಕ್ತ ವಿ ಸಿ ಸಜ್ಜನರ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿ ನಡೆಸಿ ಮಾತಾನಾಡಿದ ಸಜ್ಜನರ್ ಆರೋಪಿಗಳು ನಮ್ಮ ಮೇಲೆ ದಾಳಿ ನಡೆಸಿ ಪೊಲೀಸ್ ಕಸ್ಟಡಿಯಿಂದ ಪರಾರಿಯಾಗಲು ಯತ್ನ ಮಾಡಿದ್ದಲ್ಲದೇ ನಮ್ಮ ಪೊಲೀಸ್ ಸಿಬ್ಬಂದಿ ಮೇಲೆ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ನಾವು ಸುಮ್ಮನಿರಲು ಸಾಧ್ಯವಿಲ್ಲ. ನಾವು ಗುಂಡು ಹಾರಿಸಲೇ ಬೇಕಾಯಿತು ಎಂದು ಸ್ಪಷ್ಟಪಡಿಸಿದ್ದಾರೆ.
ಆರೋಪಿಗಳನ್ನು ಇಂದು ಮದ್ಯರಾತ್ರಿ 2 ಗಂಟೆ ಸುಮಾರಿಗೆ ಸ್ಥಳದ ಮಹಜರು ಮಾಡುವ ಸಲುವಾಗಿ ಪೊಲೀಸರ ಬೆಂಗಾವಲು ಪಡೆಯೊಂದಿಗೆ ಪ್ರಕರಣ ನಡೆದ ಟೊಂಡುಪಳ್ಳಿ ಟೋಲ್ ಗೇಟ್ ಸಮೀಪ ವಾಹನದಲ್ಲಿ ಕರೆದುದೊಯ್ಯಲಾಗಿತ್ತು. ಅಲ್ಲಿ ಆರೋಪಿಗಳ ವಿಚಾರಣೆ ನಡೆಸಿದ ಬಳಿಕ ಪಶುವೈದ್ಯೆಯನ್ನು ಬೆಂಕಿಯಲ್ಲಿ ಸುಟ್ಟಿದ್ದ ಚಟಂಪಳ್ಳಿ ಸುರಂಗದ ಬಳಿ ಕರೆ ಕರೆದುದೊಯ್ಯಲಾಯಿತು. ಆದರೆ ಆರೋಪಿಗಳನ್ನು ಅಪರಾಧ ನಡೆದ ಸ್ಥಳಕ್ಕೆ ಕರೆದು ಕೊಂಡು ಹೋದಾಗ ಅವರು ಪೊಲೀಸರಿಗೆ ಕಲ್ಲುಗಳಿಂದ ಹೊಡೆದು ಪೊಲೀಸರ ಪಿಸ್ತೂಲು ಕಸಿದುಕೊಂಡು ಗುಂಡು ಹಾರಿಸಿದ್ದಾರೆ. ಹಾಗಾಗೀ ಪೊಲೀಸರು ತಮ್ಮ ಸ್ವ ರಕ್ಷಣೆಗಾಗಿ ಗುಂಡು ಹಾರಿಸಲೇ ಬೇಕಾಯಿತು. ಆ ಸಂದರ್ಭದಲ್ಲಿ ಗಾಯಗೊಂಡ ನಾಲ್ವರು ಆರೋಪಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಸಜ್ಜನರ್ ತಿಳಿಸಿದ್ದಾರೆ.
ಆರೋಪಿಗಳು ಪೊಲೀಸರ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ನಾವು ಆರೋಪಿಗಳಲ್ಲಿ ಪೊಲೀಸರಿಗೆ ಶರಣಾಗುವಂತೆ ಹೇಳಿದ್ದೇವೆ. ಆದರೆ ಅವರು ನಮ್ಮ ಮಾತಿಗೆ ಬೆಲೆ ಕೊಡದೆ ಗುಂಡು ಹಾರಿಸುವುದನೆನು ಮುಂದುವರೆಸಿದ್ದಾರೆ. ಹಾಗಾಗಿ ನಾವು ಗುಂಡು ಹಾರಿಸಿ ಹತ್ಯೆ ಮಾಡಿದೆವು. ಎನ್ಕೌಂಟರ್ ವೇಲೆ ಇಬ್ಬರು ಪೊಲೀಸರಿಗೆ ಗಾಯಗಳಾಗಿದ್ದು ಅವರನ್ನು ಸ್ಥಳೀಯ ಪೊಲೀಸ್ ಠಾಣೆಗೆ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ಇಲ್ಲಿ ಕಾನೂನು ತನ್ನ ಕಾರ್ಯ ನಿರ್ವಹಣೆ ಮಾಡಿದೆ ಎಂದಷ್ಟೆ ನಾನು ಹೇಳುತ್ತೇನೆ. ಆರೋಪಿಗಳಿಂದ ನಾವು ಎರಡು ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿದ್ದೇವೆ. ಹಾಗೆಯೇ ಶವವನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಪ್ರಾಥಮಿಕ ಶವಪರೀಕ್ಷೆಗೆ ವರ್ಗಾವಣೆ ಮಾಡಲಾಗಿದೆ. ಎನ್ ಕೌಂಟರ್ ನಡೆದ ಸಂದರ್ಭದಲ್ಲಿ ಆರೋಪಿಗಳ ಜೊತೆ ಸುಮಾರು 10 ಜನ ಪೊಲೀಸರಿದ್ದರು. ಹಾಗೆಯೇ ನಮಗೆ ಅತ್ಯಾಚಾರ ಹತ್ಯೆ ನಡೆದ ಸ್ಥಳದಲ್ಲಿ ಪಶುವೈದ್ಯೆಯ ಮೊಬೈಲ್ ಸಿಕ್ಕಿದೆ ತಿಳಿಸಿದ್ದಾರೆ.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಎನ್ ಕೌಂಟರ್ ಕುರಿತು ವರದಿ ಕೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ಸಜ್ಜನರ್, ಯಾರೆಲ್ಲಾ ಘಟನೆಯ ವರದಿ ಕೇಳುತ್ತಾರೋ ಅವರಿಗೆಲ್ಲಾ ನಾವು ಉತ್ತರಿಸಲು ಸಿದ್ಧರಾಗಿದ್ದೇವೆ. ಈ ಆರೋಪಿಗಳು ಕರ್ನಾಟಕದಲ್ಲಿ ನಡೆದ ಹಲವು ಕೇಸುಗಳಲ್ಲಿ ಭಾಗಿಯಾಗಿದ್ದರು ಎಂಬ ಶಂಕೆ ನಮಗಿದ್ದು ಈ ಕುರಿತು ತನಿಖೆ ನಡೆಸಲಾಗುವುದು ಎಂದರು.