ನವದೆಹಲಿ, ಡಿ 07 (Daijiworld News/MB): ಉನ್ನಾವೋ ಅತ್ಯಾಚಾರ ಪ್ರಕರಣದ ಸಂತ್ರಸ್ಥೆ ವಿಚಾರಣೆ ವೇಳೆ ಕೋರ್ಟ್ಗೆ ತೆರಳುತ್ತಿದ್ದ ಸಂದರ್ಭದಲ್ಲಿ ಬೆಂಕಿ ಹಚ್ಚಿ ಹತ್ಯೆ ಮಾಡಲು ಯತ್ನಿಸಿದ್ದು ಶೇ.90 ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಉನ್ನಾವೋ ಸಂತ್ರಸ್ಥೆ ಶುಕ್ರವಾರ ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಉತ್ತರ ಪ್ರದೇಶದ ಉನ್ನಾವೋದಲ್ಲಿ ಐದು ಮಂದಿ ಕಾಮುಕರು ನಡೆಸಿದ ಕ್ರೂರ ಅತ್ಯಾಚಾರದಲ್ಲಿ 20 ವರ್ಷದ ಯುವತಿ ಬದುಕುಳಿದಿದ್ದಳು. ಈ ಪ್ರಕರಣದ ವಿಚಾರಣೆಗೆಂದು ನ್ಯಾಯಾಲಯಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಆಕೆ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳು ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ್ದರು.
ಬೆಂಕಿ ಹಚ್ಚಿದ ಪರಿಣಾಮದಿಂದಾಗಿ ಯುವತಿಯ ದೇಹ ಶೇ.90ರಷ್ಟು ಸುಟ್ಟು ಹೋಗಿದ್ದು ಆಕೆಯನ್ನು ಉತ್ತರಪ್ರದೇಶದ ಲಖನೌನಿಂದ ದೆಹಲಿಗೆ ಕರೆತಂದು ಸಫ್ಧರ್ ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾತ್ರಿ 11.40 ಸಮಯದಲ್ಲಿ ಹೃದಯ ಸ್ತಂಭನದಿಂದ ಸಂತ್ರಸ್ತೆ ಸಾವನ್ನಪ್ಪಿದ್ದಾಳೆ. ಆಕೆಯನ್ನು ರಕ್ಷಿಸಲು ಯತ್ನಿಸಿದ್ದು ಆದರೆ ರಕ್ಷಿಸಲು ಸಾಧ್ಯವಾಗಲಿಲ್ಲ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಸಂತ್ರಸ್ಥೆಯು ತನ್ನ ಸಾವಿಗೂ ಮುನ್ನ ಅತ್ಯಾಚಾರಿ ಆರೋಪಿಗಳು ಡಿಸೆಂಬರ್ 5 ರ ಗುರುವಾರ ಅಕೆಯ ಮೇಲೆ ಬೆಂಕಿ ಹಚ್ಚಿದ ಘಟನೆಯ ಕುರಿತು ಪೊಲೀಸರಿಗೆ ಆಸ್ಪತ್ರೆಯಲ್ಲಿ ಮಾಹಿತಿ ನೀಡಿದ್ದು "ಅತ್ಯಾಚಾರ ಪ್ರಕರಣದ ವಿಚಾರಣೆ ಗುರುವಾರ ರಾಯ್ ಬರೇಲಿ ಕೋರ್ಟ್ ನಲ್ಲಿ ಇದ್ದು ಆ ಹಿನ್ನಲೆಯಲ್ಲಿ ಅಲ್ಲಿಗೆ ತೆರಳಲು ಮುಂಜಾನೆ 4 ಗಂಟೆ ವೇಳೆಗೆ ರೈಲು ಏರಲೆಂದು ನಾನು ಮನೆಯಿಂದ ಹೊರಟಿದ್ದೆ. ಆ ವೇಳೆ ಈ ಐದೂ ಜನರು ರಸ್ತೆಯಲ್ಲಿ ನನಗೆಂದೇ ಕಾದು ನಿಂತಿದ್ದು ನನ್ನನ್ನು ಅಡ್ಡಗಟ್ಟಿ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಒಬ್ಬ ನನ್ನ ಕಾಲಿಗೆ ಬಡಿಗೆಯಿಂದ ಬಲವಾಗಿ ಹೊಡೆದಿದ್ದು ಆ ನೋವಿನಿಂದ ಚೇತರಿಸಿಕೊಳ್ಳುವ ಮೊದಲೇ ಇನ್ನೋರ್ವ ಆರೋಪಿ ನನ್ನ ಕುತ್ತಿಗೆ ಬಳಿ ಚಾಕುವಿನಿಂದ ಇರಿದಿದ್ದಾನೆ. ನಂತರ ನನ್ನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರು. ಬೆಂಕಿ ಉರಿ ತಾಳಲಾಗದೇ ನಾನು ಚೀರಾಡುತ್ತಾ ರಸ್ತೆಯಲ್ಲಿಯೇ ಸುಮಾರು ದೂರ ಓಡುತ್ತಾ ಹೋಗಿದ್ದು ನನ್ನ ಕೂಗು ಕೇಳಿ ಕೆಲವು ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದ್ದಾರೆ. ಆ ಬಳಿಕ ಅವರೇ ಪೊಲೀಸರಿಗೆ ಕರೆ ಮಾಡಿ ಈ ಕುರಿತು ಮಾಹಿತಿ ನೀಡಿದ್ದಾರೆ" ಎಂದು ಸಂತ್ರಸ್ಥೆ ತಿಳಿಸಿದ್ದಾರೆ.
ಹಾಗೆಯೇ ಐವರು ದಾಳಿಕೋರರ ಪೈಕಿ, ಶಿವಂ ತ್ರಿವೇದಿ ಎಂಬಾತ ಅತ್ಯಾಚಾರ ಪ್ರಮುಖ ಆರೋಪಿಯಾಗಿದ್ದು, ಐದು ದಿನಗಳ ಹಿಂದೆ ಜಾಮೀನಿನಿಂದ ಬಿಡುಗಡೆಯಾಗಿದ್ದು ಮತ್ತೊಬ್ಬ ಅತ್ಯಾಚಾರ ಆರೋಪಿ ಶುಭಂ ತ್ರಿವೇದಿ ಕೂಡ ದಾಳಿ ನಡೆಸಿದ ಗುಂಪಿನಲ್ಲಿದ್ದು, ಈಗ ತಲೆ ಮರೆಸಿಕೊಂಡಿದ್ದಾನೆ ಎಂದು ಸಂತ್ರಸ್ತೆ ಮಾಹಿತಿ ನೀಡಿದ್ದಾಳೆ.