ತೆಲಂಗಾಣ, ಡಿ 7(Daijiworld News/MSP): ಯುವ ಪಶುವೈದ್ಯೆ ದಿಶಾ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅತ್ಯಾಚಾರಿಗಳು ಶುಕ್ರವಾರ ಪೊಲೀಸರ ಗುಂಡಿಗೆ ಬಲಿಯಾಗಿದ್ದು, ಇವರ ಮೃತದೇಹವನ್ನು ಸಂರಕ್ಷಿಸಿ ಇಡುವಂತೆ ಡಿಸೆಂಬರ್ 9 ರಂದು ರಾತ್ರಿ 8:00 ರವರೆಗೆ ಸಂರಕ್ಷಿಸುವಂತೆ ತೆಲಂಗಾಣ ಹೈಕೋರ್ಟ್ ಶುಕ್ರವಾರ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಅತ್ಯಾಚಾರಿಗಳನ್ನು ಕಾನೂನು ಬಾಹಿರ ಹತ್ಯೆ ಮಾಡಲಾಗಿದೆ, ನ್ಯಾಯಾಂಗ ಹಸ್ತಕ್ಷೇಪ ಮಾಡಬೇಕು ಎಂಬ ದೂರು ಕೇಳಿಬಂದ ಹಿನ್ನಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಎಲ್ಲಾ ಆರೋಪಿಗಳ ಮರಣೋತ್ತರ ಪರೀಕ್ಷೆ ಪೂರ್ಣಗೊಂಡ ನಂತರ ಇದರ ವಿಡಿಯೋವನ್ನು ಕಾಂಪ್ಯಾಕ್ಟ್ ಡಿಸ್ಕ್ ರೂಪದಲ್ಲಿ ಅಥವಾ ಪೆನ್ ಡ್ರೈವ್ ನಲ್ಲಿ ಮಹಬೂಬ್ನಗರದಲ್ಲಿರುವ ಪ್ರಧಾನ ಜಿಲ್ಲಾ ನ್ಯಾಯಾಧೀಶ ಮಹಬೂಬ್ನಗರಕ್ಕೆ ಹಸ್ತಾಂತರಿಸುವಂತೆ ಹೈಕೋರ್ಟ್ ನಿರ್ದೇಶಿಸಿದೆ.
ಪೊಲೀಸರ ಎನ್ ಕೌಂಟರ್ ಗೆ ಬಲಿಯಾದ ನಾಲ್ಕೂ ಜನ ಆರೋಪಿಗಳ ಮೃತದೇಹವನ್ನು ಸೈಬರಾಬಾದ್ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಸಂರಕ್ಷಿಸಲಾಗಿದೆ. ಅಲ್ಲದೆ, ಈ ದೇಹಗಳ ಮರಣೋತ್ತರ ಪರೀಕ್ಷೆಯನ್ನು ಸೋಮವಾರ ನಡೆಸಲು ಜಿಲ್ಲಾ ಪೊಲೀಸ್ ಅಧಿಕಾರಿಗಳು ನಿಶ್ವಯಿಸಿದ್ದರು.
ನವೆಂಬರ್ 27 ರಂದು ನಾಲ್ಕು ಜನ ಕಾಮುಕರು ತೆಲಂಗಾಣದಲ್ಲಿ ಪಶುವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದರು. ಘಟನೆ ಸಂಭವಿಸಿ ಕೇವಲ ಒಂದು ವಾರದಲ್ಲಿ ಪೊಲೀಸರು ನಾಲ್ಕೂ ಜನ ಆರೋಪಿಗಳನ್ನು ಆತ್ಮರಕ್ಷಣೆ ಹೆಸರಿನಲ್ಲಿ ಶುಕ್ರವಾರ ಗುಂಡಿಟ್ಟು ಹತ್ಯೆ ಮಾಡಿದ್ದರು. ಪೊಲೀಸರ ಈ ಕಾರ್ಯಾಚರಣೆಗೆ ದೇಶದಾದ್ಯಂತ ಜನ ಮೆಚ್ಚು ಸೂಚಿಸಿದ್ದರೂ ನ್ಯಾಯಾಲಯ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ.