ಕೊಟ್ಟಾಯಂ, ಡಿ 7(Daijiworld News/MSP): ದೇಶದೆಲ್ಲೆಡೆ ಗ್ಯಾಂಗ್ ರೇಪ್ ಪ್ರಕರಣಗಳು ದೊಡ್ಡಮಟ್ಟದಲ್ಲಿ ಸುದ್ದಿಯಾಗುತ್ತಿರುವಾಗಲೇ ಕಾಮಪಿಪಾಶುಗಳು ತಮ್ಮ ಹೇಯ ಕೃತ್ಯ ಮುಂದುವರಿಸುತ್ತಿದ್ದಾರೆ ಎನ್ನುವುದು ಆತಂಕದ ಸಂಗತಿ. ಉನ್ನವೋ ,ಹೈದರಬಾದ್ ಪ್ರಕರಣದ ಬೆನ್ನಲ್ಲೇ ಕೇರಳದಲ್ಲಿ ವ್ಯಕ್ತಿಯೋರ್ವ ಅಪ್ರಾಪ್ತೆ ಮೇಲೆ ಅತ್ಯಾಚಾರ ಮಾಡಿದ ಪೈಶಾಚಿಕ ಕೃತ್ಯ ವರದಿಯಾಗಿದೆ.
ಕೊಟ್ಟಾಯಂ ಜಿಲ್ಲೆಯ ಕಾಂಜಿರಪಳ್ಳಿಯಲ್ಲಿರುವ 12 ವರ್ಷದ ಬಾಲಕಿ ತನ್ನ ಮನೆಯಲ್ಲಿದ್ದ ವೇಳೆ "ಕುಡಿಯಲು ಒಂದು ಲೋಟ ನೀರು ಬೇಕು" ಎಂದು ಹೇಳಿ ಮನೆಗೆ ನುಗ್ಗಿದ್ದ ಕಿರಾತಕನೋರ್ವ , ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸ್ಥಳೀಯ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಗುರುವಾರ ಸಂಜೆ ಬಾಲಕಿ ಶಾಲೆಯಿಂದ ಹಿಂದಿರುಗಿದ ನಂತರ ತನ್ನ ಮನೆಯಲ್ಲಿ ಏಕಾಂಗಿಯಾಗಿರುವಾಗ ಈ ಘಟನೆ ಸಂಭವಿಸಿದೆ. ಆರೋಪಿ ಸಂಜೆ 4.30 ಕ್ಕೆ ಬಾಲಕಿ ಮನೆಗೆ ತಲುಪಿದ್ದು, ತನ್ನನ್ನು ತಾನು ಬಾಲಕಿಯ ಸಹೋದರನ ಸ್ನೇಹಿತ ಎಂದು ಪರಿಚಯಿಸಿಕೊಂಡು ಕುಡಿಯಲು ನೀರು ಕೇಳಿದ್ದಾನೆ. ಅಪ್ರಾಪ್ತೆಯ ಹೊರತು ಮನೆಯಲ್ಲೂ ಯಾರೂ ಇಲ್ಲದಿರುವುದನ್ನು ಬಾಲಕಿ ಮೇಲೆ ಮುಗಿಬಿದ್ದಿದ್ದಾನೆ. ಸಂತ್ರಸ್ತೆ ಬಾಲಕಿ ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆರೋಪಿ ಪರಾರಿಯಾಗಿದ್ದಾನೆ ಮತ್ತು ಆತನನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.