ನವದೆಹಲಿ, ಡಿ 7(Daijiworld News/MSP): ಉನ್ನವೋ ಸಂತ್ರಸ್ತೆ ತನ್ನ ಕೊನೆಯ ಉಸಿರಿಗೂ ಮುನ್ನ ತನ್ನ ಅಣ್ಣನೊಂದಿಗೆ ಆಡಿದ ಮಾತುಗಳು ಎಂಥವರನ್ನು ಮನಕಲಕುವಂತೆ ಮಾಡುತ್ತದೆ "ಭೈಯಾ ಮುಜೆ ಬಚಾ ಲೋ, ಮುಜೆ ಮರ್ನಾ ನಹಿ ಹೈ. ಜಿನ್ಹೋನ್ನೆ ಮೇರೆ ಸಾಥ್ ಯೆ ಕಿಯಾ ಹೈ, ಉನ್ಹೆ ಮೌತ್ ಕಿ ಸಝಾ ಪಾತೆ ದೇಖ್ನಾ ಚಾಹ್ತಿ ಹು "(ಅಣ್ಣ , ನನಗೆ ಸಾಯಲು ಇಷ್ಟವಿಲ್ಲ ನನಗೆ ಬದುಕಬೇಕು, ನನ್ನನ್ನು ಯಾರು ಈ ಸ್ಥಿತಿಗೆ ತಂದಿದ್ದಾರೋ ಅವರನ್ನು ನಾನು ಸಾವಿನ ಕುಣಿಕೆಯಲ್ಲಿ ನೋಡಲು ಬಯಸುತ್ತೇನೆ).
ಬೆಂಕಿಯಲ್ಲಿ ಬೆಂದು, ಸುಟ್ಟ ಗಂಭೀರ ಗಾಯಗಳಾಗಿದ್ದ ಉನ್ನಾವ್ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯು ಐಸಿಯುಗೆ ಹೋಗುವ ಮುಂಚಿತವಾಗಿ ತನ್ನಅಣ್ಣನೊಂದಿಗೆ ಆಡಿದ ಕೊನೆಯ ಮಾತುಗಳಿವು." ಅಣ್ಣ ನನಗೆ ಸಾಯುವುದಕ್ಕೆ ಇಷ್ಟವಿಲ್ಲ. ನನ್ನ ಈ ಸ್ಥಿತಿಗೆ ಕಾರಣರಾದವರನ್ನು ಸಾವಿನ ಶಿಕ್ಷೆಯಲ್ಲಿ ನೋಡಲು ಬಯಸುತ್ತೇನೆ ಎಂದು ನನ್ನ ತಂಗಿ ಆ ನೋವಿನಿಂದ ಸಂಕಟಪಡುತ್ತಾ ಬಿಕ್ಕಳಿಸುತ್ತಿದ್ದಳು ’ ಎಂದು ಸಂತ್ರಸ್ತೆ ಅಣ್ಣ ಮಾಧ್ಯಮಗಳಿಗೆ ಹೇಳಿದ್ದಾರೆ.
ಬೆಂಕಿಯ ಸುಟ್ಟ ಗಾಯಗಳಿಂದಾಗಿ ಗಂಭೀರ ಸ್ಥಿತಿಯಲ್ಲಿದ್ದ ಸಂತ್ರಸ್ತೆಯನ್ನು ಲಖನೌದ ಶ್ಯಾಮ್ ಪ್ರಸಾದ್ ಮುಖರ್ಜಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆ ಬಳಿಕ ಸಂಜೆವೇಳೆಗೆ ಸಂತ್ರಸ್ತೆಯನ್ನು ಏರ್ ಆಂಬುಲೆನ್ಸ್ ಮೂಲಕ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಯಿಗಿತ್ತು. ಶುಕ್ರವಾರ ಸಂಜೆ ವೇಳೆ ಆರೋಗ್ಯ ವಿಷಮ ಸ್ಥಿತಿಗೆ ತಲುಪಿ 11.10ಕ್ಕೆ ಹೃದಯಾಘಾತವಾಗಿ ಚಿಕಿತ್ಸೆ ಫಲಕಾರಿಯಾಗದೆ 11.40ಕ್ಕೆ ಅವರು ಕೊನೆಯುಸಿರೆಳೆದಿದ್ದರು.
೨೦೧೮ರ ಡಿಸೆಂಬರ್ ಸಂತ್ರಸ್ತೆಯನ್ನು ಅಪಹರಿಸಿ ಅತ್ಯಾಚಾರ ನಡೆಸಲಾಗಿತ್ತು. ಶಿವರಾಂ ತ್ರಿವೇದಿ ಮತ್ತು ಶುಭಂ ತ್ರಿವೇದಿ ಎಂಬ ಆರೋಪಿಗಳು ಈ ಕೃತ್ಯ ಎಸಗಿದ್ದರು. ಮಾರ್ಚ್ನಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಅತ್ಯಾಚಾರ ಪ್ರಕರಣ ವಿಚಾರಣೆಗಾಗಿ ಗುರುವಾರ ಬೆಳಿಗ್ಗೆ ರಾಯಬರೇಲಿ ನ್ಯಾಯಾಲಯಕ್ಕೆ ಹೋಗುತ್ತಿದ್ದಾಗ ಐವರು ದುಷ್ಕರ್ಮಿಗಳು ಸಂತ್ರಸ್ತೆಯನ್ನು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ್ದರು.