ನವದೆಹಲಿ, ಡಿ 7(Daijiworld News/MSP): ಸೇನೆಯ ಅಧಿಕಾರಿಗಳಂತೆ ನಟಿಸಿ ಇಬ್ಬರು ಅಪರಿಚಿತರು, ಸೇನಾ ಶಿಬಿರದಲ್ಲಿದ್ದ ಯೋಧರ ಎರಡು ರೈಫಲ್ಸ್ ಮತ್ತು ಕಾಟ್ರಿಡ್ಜ್ ಗಳ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಭೋಪಾಲ್ ನಿಂದ ಸುಮಾರು 200 ಕಿ.ಮೀ ದೂರದಲ್ಲಿರುವ ಪಚಮಾರಿ ನಗರದ ಸೇನಾ ಕಂಟೋನ್ಮೆಂಟ್ ನಲ್ಲಿ ಈ ಘಟನೆ ನಡೆದಿದ್ದು, ಗುರುವಾರ ರಾತ್ರಿ ಇಬ್ಬರು ಅಪರಿಚಿತರು ಸೇನಾ ಅಧಿಕಾರಿಗಳ ಸೋಗಿನಲ್ಲಿ ಆಗಮಿಸಿದ್ದರು. ಆ ಬಳಿಕ ಕರ್ತವ್ಯದಲ್ಲಿದ್ದ ಸಿಬ್ಬಂದಿಯೊಂದಿಗೆ ಮಾತನಾಡುತ್ತಾ ರೈಫಲ್ ಮತ್ತು 20 ಸಜೀವ ಸಿಡಿಗುಂಡುಗಳನ್ನು ಎಗರಿಸಿ ಪರಾರಿಯಾಗಿದ್ದಾರೆ.
ಸ್ಥಳೀಯ ನಿಲ್ದಾಣದಿಂದ ಟ್ಯಾಕ್ಸಿ ಮೂಲಕ ಬಂದ ಅವರಿಬ್ಬರು ಅದೇ ಟ್ಯಾಕ್ಸಿ ಮೂಲಕವೇ ಹಿಂತಿರುಗಿದ್ದಾರೆ. ಅವರು ಅಲ್ಲಿಂದ ತೆರಳಿದ ಬಳಿಕ ಶಸ್ತ್ರಾಸ್ತ್ರ ಕಾಣೆಯಾದ ಬಗ್ಗೆ ಅರಿವಾಗಿದೆ. ಅರೋಪಿಗಳ ಗುರುತು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಇವರಿಬ್ಬರು ಪಂಜಾಬಿ ಭಾಷೆಯಲ್ಲಿ ಮಾತಡುತ್ತಿದ್ದರು ಎಂದು ತಿಳಿದುಬಂದಿದೆ.
ಎಲ್ಲೆಡೆ ಎಚ್ಚರಿಕೆ ವಹಿಸಲಾಗಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಅಪರಿಚತರ ಮೇಲೆ ಎಫ್ ಐಆರ್ ದಾಖಲಿಸಲಾಗಿದೆ. ಭಯೋತ್ಪಾದಕರ ಕೃತ್ಯ ಇರಬಹುದು ಎಂದು ಪೊಲೀಸರು ಶಂಕಿಸಿದ್ದು, ಅವರ ಪತ್ತೆಗೆ ಹಲವು ತಂಡ ರಚಿಸಲಾಗಿದೆ.