ಶಾಜಾಪುರ, ಡಿ 7(Daijiworld News/MSP): ಮನೆಯೊಂದಕ್ಕೆ ನುಗ್ಗಿದ ಕಳ್ಳ ಅಲ್ಲಿ, ಕದಿಯಲು ಏನೂ ಸಿಗದ ಕಾರಣ, ತೀವ್ರ ನಿರಾಶೆಯಿಂದ ಮನೆ ಮಾಲೀಕನಿಗೆ ಚೀಟಿಯೊಂದನ್ನು ಬರೆದಿಟ್ಟು ಹೋದ ಘಟನೆ ಮಧ್ಯಪ್ರದೇಶದ ಶಾಜಾಪುರ ಜಿಲ್ಲೆಯಲ್ಲಿ ನಡೆದಿದೆ.
ಆದರ್ಶ ನಾಗೆನ್ ನಗರದ ಪೊಲೀಸ್ ಲೈನ್ ರಸ್ತೆಯಲ್ಲಿರುವ ಆರ್ಇಎಸ್ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಪರ್ವೀಶ್ ಸೋನಿ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಕಳ್ಳ ರಾತ್ರಿ ಮನೆಯ ಹಿಂಬದಿಯಿಂದ ಒಳಕ್ಕೆ ಪ್ರವೇಶಿಸಿದ್ದಾನೆ. ಸೋನಿಯವರ ಮನೆಯ ಅಕ್ಕ ಪಕ್ಕ ನ್ಯಾಯಾದೀಶರ ಹಾಗೂ ಸರ್ಕಾರಿ ಅಧಿಕಾರಿಗಳ ಬಂಗಲೆಗಳಿದ್ದು , ಕಳ್ಳ ಮನೆ ದರೋಡೆಗೆ ವಿಫಲ ಯತ್ನ ನಡೆಸುವ ಸಮಯದಲ್ಲಿ ಸೋನಿ ಮನೆಯಲ್ಲಿ ಇರಲಿಲ್ಲ.
ಮಾರನೇ ದಿನ ಬೆಳಗ್ಗೆ ಸೋನಿ ಅವರ ಕೆಲಸದಾಳು ಬಂದು ನೋಡುವಾಗ ಮನೆ ಕಳ್ಳತನವಾಗಿರುವುದು ತಿಳಿದುಬಂದಿದ್ದು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದಾಗ ಮನೆಯಲ್ಲಿದ್ದ ಎಲ್ಲಾ ಬೀರುಗಳನ್ನು ಮುರಿದು ಬಟ್ಟೆ ಹಾಗೂ ಇತರ ದೈನಂದಿನ ಬಳಕೆಯ ವಸ್ತುಗಳು ಹರಡಿ ಬಿದ್ದಿದ್ದು, ನಗದು ಅಭರಣಗಳಿಗೆ ತಡಕಾಡಿರುವುದು ಪರಿಶೀಲನೆಯಲ್ಲಿ ತಿಳಿದುಬಂದಿದೆ.
ಇದೇ ವೇಳೆ ಮೇಜಿನ ಮೇಲಿದ್ದ ಚೀಟಿಯೊಂದು ಪೊಲೀಸರ ಕಣ್ಣಿಗೆ ಬಿದ್ದಿದೆ. ಮನೆ ತಡಕಾಡಿದ ಏನೂ ಸಿಗದೇ ಇದ್ದಾಗ ಕಳ್ಳ ಮನೆಮಾಲೀಕರಿಗೆ ಪತ್ರವೊಂದು ಕಾಫಿ ಟೇಬಲ್ ಮೇಲಿದ್ದ ಡೈರಿಯಲ್ಲಿ ಪತ್ರ ಬರೆದಿದ್ದಾನೆ. ಆ ಪತ್ರದಲ್ಲಿ "ನೀವು ಬಹಳ ಕಂಜೂಸ್, ಕಿಟಕಿ ಮುರಿದು ಒಳಬರುವ ಪ್ರಯತ್ನ ಮಾಡಬೇಕಿರಲಿಲ್ಲ. ನೀನು ನನ್ನ ರಾತ್ರಿಯನ್ನು ವ್ಯರ್ಥವಾಗುವಂತೆ ಮಾಡಿದ್ದಿ " ಎಂದು ಯಾವುದೇ ಬೆಲೆ ಬಾಳುವ ವಸ್ತು ಸಿಗದೆ ಖಾಲಿ ಕೈಯಲ್ಲಿ ಹಿಂತಿರುಗಬೇಕಾದ ನಿರಾಸೆಯನ್ನು ಪತ್ರದಲ್ಲಿ ವ್ಯಕ್ತಪಡಿಸಿದ್ದಾನೆ.
ಒಟ್ಟಾರೆ ವಿಐಪಿ ಮನೆಗಳಿರುವ ಏರಿಯಾದಲ್ಲಿ ಕಳ್ಳರ ಕೈಚಳಕ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದ್ರೆ,ಇನ್ನೊಂದೆಡೆ ಕಳ್ಳನ ಪತ್ರವು ಸುದ್ದಿಯಲ್ಲಿದೆ. ಕಳ್ಳನ ಕೈ ಬರಹವನ್ನು ಪೊಲೀಸರು ಕೈಬರಹ ತಜ್ಞರಿಗೆ ಕಳುಹಿಸಿ ತನಿಖೆ ಮುಂದುವರಿಸಿದ್ದಾರೆ.