ತಿರುವನಂತಪುರಂ, ಡಿ 07 (DaijiworldNews/SM): ಹೈದರಾಬಾದ್ ನಲ್ಲಿ ಪಶುವೈದ್ಯೆಯ ಮೇಲೆ ಅತ್ಯಾಚಾರ ನಡೆಸಿ ಬಳಿಕ ಆಕೆಯನ್ನು ಅದೇ ಜಾಗದಲ್ಲಿ ಸುಟ್ಟು ಹಾಕಿದ್ದ ಕ್ರಿಮಿನಲ್ ಗಳನ್ನು ಬೆರಳೆನಿಕೆಯ ದಿನಗಳಲ್ಲೇ ತಾವು ಕೃತ್ಯ ಎಸಗಿದ ಜಾಗದಲ್ಲಿ ಪೊಲೀಸರು ಎನ್ ಕೌಂಟರ್ ಮಾಡಿದ್ದು, ದೇಶವೇ ಪೊಲೀಸರ ಕಾರ್ಯಕ್ಕೆ ಎದ್ದು ನಿಂತು ಸಲಾಂ ಹೊಡೆಯುತ್ತಿದೆ. ಅತ್ಯಾಚಾರಿಗಳಿಗೆ ತಕ್ಕ ಪಾಠ ಕಲಿಸುವ ನಿಟ್ಟಿನಲ್ಲಿ ಪೊಲೀಸರು ಉತ್ತಮ ಕಾರ್ಯ ಎಸಗಿದ್ದಾರೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಈ ನಡುವೆ ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಭಾರತವನ್ನು ವಿಶ್ವದ ರೇಪ್ ರಾಜಧಾನಿ ಎಂದು ಹೇಳುವ ಮೂಲಕ ಹೊಸ ವಿವಾದವೊಂದನ್ನು ರಾಹುಲ್ ಸೃಷ್ಠಿಸಿದ್ದಾರೆ. ಕೇರಳದ ವಯನಾಡಿನಲ್ಲಿ ಮಾತನಾಡಿರುವ ಅವರು, ಈ ಹೇಳಿಕೆ ನೀಡಿದ್ದಾರೆ. ಭಾರತವನ್ನು ವಿಶ್ವದ ಅತ್ಯಾಚಾರಗಳ ರಾಜಧಾನಿ ಎಂದು ಕರೆಯಲಾಗುತ್ತಿದೆ. ಹೆಣ್ಣು ಮಕ್ಕಳಿಗೆ ಇಲ್ಲಿ ಸೂಕ್ತ ರಕ್ಷಣೆ ನೀಡಲು ಸಾಧ್ಯವಾಗುತ್ತಿಲ್ಲ ಎಂದು ವಿದೇಶಗಳು ಆರೋಪಿಸುತ್ತಿದ್ದು, ಈ ಬಗ್ಗೆ ಪ್ರಶ್ನೆ ಮಾಡುತ್ತಿವೆ ಎಂದು ಹೇಳಿದ್ದಾರೆ.
ಇನ್ನು ಉತ್ತರ ಪ್ರದೇಶದ ಬಿಜೆಪಿ ಶಾಸಕರೊಬ್ಬರು ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಒಂದೇ ಒಂದು ಮಾತನ್ನೂ ಆಡುತ್ತಿಲ್ಲ ಎಂದು ಆರೋಪಿಸಿರುವ ಅವರು, ಈ ಬಗ್ಗೆ ಪ್ರಧಾನಿಯವರು ಪ್ರತಿಕ್ರಿಯೆ ನೀಡಬೇಕೆಂದಿದ್ದಾರೆ. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವರು ಗುಡುಗಿದ್ದಾರೆ.