ಉತ್ತರಪ್ರದೇಶ, ಡಿ 08 (Daijiworld News/MB) : "ಉನ್ನಾವೋ ಅತ್ಯಾಚಾರ ಸಂತ್ರಸ್ಥೆಯ ಕುಟುಂಬಕ್ಕೆ 25 ಲಕ್ಷ ರೂ . ಪರಿಹಾರವನ್ನು ಹಾಗೂ ಪ್ರಕರಣದ ತ್ವರಿತ ವಿಚಾರಣೆಗೆ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯವನ್ನು ಸ್ಥಾಪಿಸುವುದಾಗಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘೋಷಣೆ ಮಾಡಿದೆ" ಎಂದು ಸಚಿವ ಸ್ವಾಮಿ ಪ್ರಸಾದ ಮೌರ್ಯ ತಿಳಿಸಿದ್ದಾರೆ.
ಅವರು ಉನ್ನಾವೋ ಶನಿವಾರ ಸಂಜೆ ಅತ್ಯಾಚಾರ ಸಂತ್ರಸ್ಥೆ ಮನೆಗೆ ಭೇಟಿ ನೀಡಿ, "ಶೀಘ್ರವೇ ಸಂತ್ರಸ್ಥೆ ನ್ಯಾಯಾ ದೊರಕಿಸುತ್ತೇವೆ. ಇದಕ್ಕಾಗಿ ತ್ವರಿತ ವಿಚಾರಣಾ ನ್ಯಾಯಾಲಯವನ್ನು ಸ್ಥಾಪಿಸಲು ಸರಕಾರ ನಿರ್ಧರಿಸಿದೆ. ಅಷ್ಟು ಮಾತ್ರವಲ್ಲದೇ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಕುಟುಂಬಕ್ಕೆ 25 ಲಕ್ಷ ರೂ. ನೀಡಲಾಗುವುದು ಎಂದರು.
ಹಾಗೆಯೇ ಸಂತ್ರಸ್ಥೆ ಕುಟುಂಬಕ್ಕೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ (ಪಿಎಂಎವೈ) ಮನೆಯೊಂದನ್ನು ನಿರ್ಮಿಸಿಕೊಡಲಾಗುವುದು ಎಂದು ಹೇಳಿದ್ದಾರೆ.
ಸಂತ್ರಸ್ಥೆಯ ಮನೆಗೆ ಪ್ರಯಾಂಕ ಗಾಂಧಿ, ಉತ್ತರ ಪ್ರದೇಶ ರಾಜ್ಯ ಸಚಿವ ಕಮಲ್ ರಾಣಿ ವರುಣ್ ಮುಂತಾದ ಅನೇಕರು ಭೇಟಿ ನೀಡಿ ಸಾಂತ್ವನ ನೀಡಿದ್ದಾರೆ.
ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರಿಯಾಂಕ ಗಾಂಧಿ, "ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಸಂತ್ರಸ್ಥೆಗೆ ನಾವು ನ್ಯಾಯಾ ಕೊಡಿಸಲಾಗಲಿಲ್ಲ. ಇದು ನಮ್ಮೆಲ್ಲರ ವೈಫಲ್ಯ, ನಾವು ಕೂಡ ಇದರಲ್ಲಿ ತಪ್ಪಿತಸ್ಥರು , ಸಂತ್ರಸ್ತೆಗೆ ಶೀಘ್ರವಾಗಿ ನ್ಯಾಯಾ ಕೊಡಿಸಲಾಗುವುದು" ಎಂದರು.
ಹಾಗೆಯೇ "ಸಂತ್ರಸ್ಥೆಗೆ ರಕ್ಷಣೆ ಯಾಕೆ ಒದಗಿಸಿಲ್ಲ ಹಾಗೂ ಪ್ರಕರಣ ದಾಖಲು ಮಾಡಲು ಒಪ್ಪದ ಪೊಲೀಸರ ಮೇಲೆ ಯಾವ ಕ್ರಮ ಕೈಗೊಳ್ಳಲಾಗಿದೆ"ಎಂದು ಟ್ವೀಟ್ ಮಾಡಿದ್ದಾರೆ.
ಉನ್ನಾವೋದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ವಿಚಾರಣೆಗೆಂದು ತೆರಳುತ್ತಿದ್ದ ವೇಳೆ ಸಂತ್ರಸ್ಥೆಗೆ ಐವರು ಅತ್ಯಾಚಾರಿ ಆರೋಪಿಗಳು ಬೆಂಕಿ ಹಾಕಿ ಸುಟ್ಟಿದ್ದರು. ಆಕೆಯ ದೇಹ ಶೇ.90 ರಷ್ಟು ಸುಟ್ಟಿದ್ದು ದೆಹಲಿಯ ಆಸ್ಪತ್ರೆಯಲ್ಲಿ ಶನಿವಾರ ಕೊನೆಯುಸಿರೆಳೆದಿದ್ದಾಳೆ.