ನವದೆಹಲಿ, ಡಿ 08 (Daijiworld News/MB) : ಹೈದರಾಬಾದ್ನಲ್ಲಿ ಪಶುವೈದ್ಯೆ ಪ್ರಿಯಾಂಕಾ ರೆಡ್ಡಿಯನ್ನು ಅತ್ಯಾಚಾರ ಮಾಡಿ ಬೆಂಕಿ ಹಾಕಿ ಸುಟ್ಟ ಆರೋಪಿಗಳನ್ನು ಎನ್ಕೌಂಟರ್ ಮಾಡಿದ ಪ್ರಕರಣ ಸುಪ್ರೀಂ ಕೋರ್ಟ್ ತಲುಪಿದ್ದು ಎನ್ಕೌಂಟರ್ ವಿಚಾರದಲ್ಲಿ ಶಂಕೆ ವ್ಯಕ್ತಪಡಿಸಿದ ಎರಡು ಪ್ರತ್ಯೇತ ಅರ್ಜಿಗಳು ಶನಿವಾರ ಸುಪ್ರೀಂಕೋರ್ಟ್ಗೆ ಸಲ್ಲಿಸಲಾಗಿದೆ.
ವಕೀಲರಾದ ಜಿ.ಎಸ್.ಮಣಿ ಹಾಗೂ ಪ್ರದೀಪ್ ಕುಮಾರ್ ಯಾದವ್ ಅವರು "2014ರಲ್ಲೇ ಸುಪ್ರೀಂಕೋರ್ಟ್ ಎನ್ಕೌಂಟರ್ ನಡೆಸುವ ವೇಳೆ ಪಾಲಿಸಬೇಕಾದ 16 ಮಾರ್ಗಸೂಚಿಗಳ ಕುರಿತು ಸ್ಪಷ್ಟವಾಗಿ ಆದೇಶಿಸಿದೆ. ಆದರೆ ಗುರುವಾರ ಹೈದರಾಬಾದ್ ಅತ್ಯಾಚಾರ ಆರೋಪಿಗಳನ್ನು ಎನ್ಕೌಂಟರ್ ನಡೆಸಿದ ವೇಳೆ ಈ ನಿಮಯ ಉಲ್ಲಂಘಿಸಲಾಗಿದ್ದು ಈ ಎನ್ಕೌಂಟರ್ ನಲ್ಲಿ ಭಾಗಿಯಾದ ಐಪಿಎಸ್ ಅಧಿಕಾರಿ ವಿಶ್ವನಾಥ ಸಜ್ಜನರ್ ಸೇರಿದಂತೆ ಪೊಲೀಸರ ವಿರುದ್ಧ ಎಫ್ಐಆರ್ ದಾಖಲಿಸಿ, ತನಿಖೆ ನಡೆಸಬೇಕು" ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
ವಕೀಲ ಎಂ.ಎನ್.ಶರ್ಮಾ "ಸಂವಿಧಾನದ 21ನೇ ಪರಿಚ್ಛೇದ ನ್ಯಾಯೋಚಿತ ವಿಚಾರಣೆ ಹಾಗೂ ಜೀವಿಸುವ ಹಕ್ಕು ನೀಡುತ್ತದೆ. ಆದರೆ ಈ ಎನ್ಕೌಂಟರ್ನಲ್ಲಿ ಅದನ್ನು ಪೊಲೀಸರು ಉಲ್ಲಂಘಿಸಿ ಆರೋಪಿಗಳನ್ನು ಹತ್ಯೆ ಮಾಡಿದ್ದಾರೆ. ಆರೋಪಿಗಳನ್ನು ದೋಷಿ ಎಂದು ಪ್ರಕರಣದ ಯಾವುದೇ ವಿಚಾರಣೆ ನಡೆಸದೆಯೇ ಹೇಳಲಾಗಿದೆ. ಈ ಹತ್ಯೆ ಪೊಲೀಸ್ ವಶದಲ್ಲಿ ನಡೆದ ಹತ್ಯೆಯಾಗಿದೆ. ಇದರಲ್ಲಿ ಎಲ್ಲಾ ಪೊಲೀಸರು ಭಾಗಿಯಾಗಿದ್ದಾರೆ. ಹಾಗಾಗಿ ಈ ಕುರಿತು ಸ್ವತಂತ್ರವಾಗಿ ತನಿಖೆ ನಡೆಸಬೇಕು ಹಾಗೂ ಬಲಿಯಾದವರ ಕುಟುಂಗಳಿಗೆ ಸೂಕ್ತ ಪರಿಹಾರ ಕಲ್ಪಿಸಬೇಕು" ಎಂದು ಅರ್ಜಿಯಲ್ಲಿ ಕೋರಿದ್ದಾರೆ.
ಪಶುವೈದ್ಯೆ ಪ್ರಿಯಾಂಕಾ ರೆಡ್ಡಿಯನ್ನು ನವೆಂಬರ್ 29 ರಂದು ಈ ನಲ್ವರು ಆರೋಪಿಗಳು ಅತ್ಯಾಚಾರ ನಡೆಸಿ ಆಕೆಯನ್ನು ಸುಟ್ಟು ಹಾಕಿದ್ದರು. ಈ ವಿಚಾರ ದೇಶದಾದ್ಯಂತ ಕೋಲಾಹಲ ಸೃಷ್ಟಿಸಿತ್ತು. ದಿನದಿಂದ ದಿನಕ್ಕೆ ಹೆಣ್ಣಿನ ಮೇಲೆ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳ ಕುರಿತು ತೀವ್ರ ಖಂಡನೆ ವ್ಯಕ್ತವಾಗಿತ್ತು.
ಗುರುವಾರ ಬೆಳಿಗ್ಗೆ 2 ಗಂಟೆ ಸುಮಾರಿಗೆ ಘಟನಾ ಸ್ಥಳದ ಮಹಜರಿಗಾಗಿ ಆರೋಪಿಗಳನ್ನು ಕೊಂಡೊಯ್ದಿದ್ದು ಈ ಸಂದರ್ಭದಲ್ಲಿ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದು ಮಾತ್ರವಲ್ಲದೇ ಪೊಲೀಸರ ಪಿಸ್ತೂಲನ್ನು ಕಸಿದುಕೊಂಡು ಗುಂಡು ಹಾರಿಸಿದರು. ಹಾಗಾಗಿ ಪೊಲೀಸರು ತಮ್ಮ ಆತ್ಮ ರಕ್ಷಣೆಗಾಗಿ ಎನ್ಕೌಂಟರ್ ಮಾಡಿದ್ದರು. ಈ ಘಟನೆಗೆ ತೀವ್ರ ಶ್ಲಾಘನೆ ವ್ಯಕ್ತವಾಗಿತ್ತು. ಹಾಗೆಯೇ ಉನ್ನಾವೋ ಹಾಗೂ ನಿರ್ಭಯ ಸಂತ್ರಸ್ಥೆಯ ಕುಟುಂಬ ನಮಗೂ ನ್ಯಾಯ ದೊರಕಿಸಿ ಎಂದು ಮನವಿ ಮಾಡಿದ್ದರು.