ನವದೆಹಲಿ, ಡಿ 08 (Daijiworld News/MB) : ದೆಹಲಿಯ ರಾಣಿ ಜಾನ್ಸಿ ರಸ್ತೆಯಲ್ಲಿರುವ ಅನಜ್ ಮಂಡಿ ಕಾರ್ಖಾನೆಯಲ್ಲಿ ಬೆಂಕಿ ಹತ್ತಿಕೊಂಡ ಪರಿಣಾಮ 40ಕ್ಕೂ ಅಧಿಕ ಜನ ಕಾರ್ಮಿಕರು ಮೃತಪಟ್ಟ ಘಟನೆ ಭಾನುವಾರ ಮುಂಜಾನೆ ನಡೆದಿದ್ದು ಈ ಅವಘಡ ಮೇಲ್ನೋಟಕ್ಕೆ ಶಾರ್ಟ್ಸರ್ಕ್ಯೂಟ್ನಿಂದಾಗಿ ಸಂಭವಿಸಿದಂತೆ ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಾಗೆಯೇ ಪ್ರಾಣ ಕಳೆದುಕೊಂಡ ಕಾರ್ಮಿಕರ ಕುಟುಂಬಸ್ಥರಿಗೆ 10 ಲಕ್ಷ ರೂಪಾಯಿ ಪರಿಹಾರವನ್ನು ದೆಹಲಿ ಸರಕಾರ ಘೋಷಿಸಿದ್ದಾರೆ. ಗಂಭೀರವಾಗಿ ಗಾಯಗೊಂಡವರಿಗೆ ಗಾಯಗೊಂಡವರಿಗೆ ತಲಾ 1 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಗಾಯಗೊಂಡವರನ್ನು ಎಲ್ ಎನ್ ಜೆಪಿ ಮತ್ತು ಲೇಡಿ ಹರ್ದಿಂಜ್ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಪ್ರಕರಣದ ತನಿಖೆಯನ್ನು ನಡೆಸಲು ಅಪರಾಧ ವಿಭಾಗ ಮತ್ತು ವಿಧಿವಿಜ್ಞಾನ ಪ್ರಯೋಗಾಲಯ ಸ್ಥಳಕ್ಕೆ ಆಗಮಿಸಿದೆ.
ಬೆಂಕಿ ಹತ್ತಿಕೊಂಡ ವಿಷಯ ತಿಳಿದ ಕೂಡಲೇ 15 ಅಗ್ನಿ ಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ನಿರತವಾಗಿತ್ತು. ರಕ್ಷಣೆ ಕಾರ್ಯದ ಸಂದರ್ಭದಲ್ಲಿ ಇಬ್ಬರು ಪೊಲೀಸರು ಮತ್ತು ಇಬ್ಬರು ಅಗ್ನಿಶಾಮಕ ಸಿಬ್ಬಂದಿಗೆ ಸಹ ಗಾಯಗಳಾಗಿವೆ.
ಇಂದು ನಸುಕಿನ ಜಾವ ಸಂಭವಿಸಿದ ಅಗ್ನಿ ದುರಂತದ ವೇಳೆ ಕಾರ್ಖಾನೆಯೊಳಗಿದ್ದ 62 ಮಂದಿಯಲ್ಲಿ ಹಲವರನ್ನು ಅಗ್ನಿಶಾಮಕ ಮತ್ತು ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿ ರಕ್ಷಿಸಿದ್ದಾರೆ.
34 ಜನ ದೆಹಲಿಯ ಲೋಕ ನಾಯಕ ಆಸ್ಪತ್ರೆಯಲ್ಲಿ ಹಾಗೂ 9 ಜನ ಲೇಡಿ ಹರ್ದಿಂಗ್ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ ಎಂದು ತಿಳಿದುಬಂದಿದೆ.
ಅಗ್ನಿ ಅವಘಡಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣವಾಗಿರಬಹುದು ಎಂದು ತಕ್ಷಣಕ್ಕೆ ಕಂಡುಬರುತ್ತಿದ್ದು, ನಿಖರ ಕಾರಣ ತಿಳಿದುಬರಲು ತನಿಖೆಯ ಅಗತ್ಯವಿದೆ ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಸಹ ಹೇಳಿದ್ದಾರೆ.