ಗದಗ, ಡಿ 08 (Daijiworld News/MB) : "ನಾಳೆ ಬರುವ ಉಪಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ 15 ಕ್ಷೇತ್ರದಲ್ಲೂ ಗೆಲುವು ಸಾಧಿಸುತ್ತೆ. ಹಾಗಾಗಿ ಇನ್ನು ಮುಂದೆ ಕಾಂಗ್ರೆಸ್ ಎಲ್ಲಿದೆ ಎಂದು ಹುಡುಕಬೇಕಾಗುತ್ತೆ" ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಇಂದು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, " ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಕಂಡ ಕನಸನ್ನು ಇನ್ನೂ ಕಾಣುತ್ತಿದ್ದಾರೆ. ಮುಂದೆ ಯಡಿಯೂರಪ್ಪನವರೇ ಮೂರುವರೆ ವರ್ಷ ಮುಖ್ಯಮಂತ್ರಿ ಆಗಿರುತ್ತಾರೆ" ಎಂದು ಹೇಳಿದ್ದಾರೆ.
"ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಖುರ್ಚಿ, ಹಿಂದೆ-ಮುಂದೆ ಹೋಗುವ ಆ ಜನ ಈ ರೀತಿ ಕನಸು ಕಂಡು ಕಂಡು ಮತ್ತೆ ನಾವು ಮುಖ್ಯಮಂತ್ರಿಯಾಗುತ್ತೇವೆ ಎಂಬ ಭ್ರಮಾಲೋಕದಲ್ಲಿ ಇದ್ದಾರೆ. ಇನ್ನು ಜೀವನ ಪರ್ಯಂತ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ. ಹಾಗಾಗಿ ಅವರು ಮುಖ್ಯಮಂತ್ರಿ ಆಗುವುದು ಇಲ್ಲ" ಎಂದು ಅಭಿಪ್ರಾಯ ಪಟ್ಟಿದ್ದಾರೆ.
"ರಾಜ್ಯದ ಆಡಳಿತವನ್ನು ಹೊಂದಾಣಿಕೆ ಇಲ್ಲದವರು ಹೇಗೆ ಮಾಡುತ್ತಾರೆ?. ಉಪಚುನಾವಣೆ ವೇಳೆ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಮಲ್ಲಿಕಾರ್ಜುನ್ ಖರ್ಗೆ, ಪರಮೇಶ್ವರ್ ಒಬ್ಬೊಬ್ಬರು ಒಂದೊಂದು ದಿಕ್ಕಿಗೆ ಹೋಗಿದ್ದಾರೆ. ಕಾಂಗ್ರೆಸ್ ನವರಿಗೂ ರಾಜ್ಯದಲ್ಲಿ ಕಾಂಗ್ರೆಸ್ ಕಥೆ ಮುಗಿತು ಎಂದು ತಿಳಿದಿದೆ. ನಾಳೆ ಫಲಿತಾಂಶ ಬರುತ್ತದೆ. ಬಿಜೆಪಿ ಇನ್ನು ಒಂದು ದಿನ ಮಾತ್ರ ಆಡಳಿತ ಮಾಡಲಿದೆ ಎಂದು ಹೇಳಿ ಅವರ ಆಸೆ ತೀರಿಸಿಕೊಳ್ಳುತ್ತಿದ್ದಾರೆ. ಹೀಗೆ ಹೇಳಿ ಆಸೆ ತೀರಿಸಲಿ. ನಾನು ಯಾಕೆ ಬೇಡ ಎಂದು ಹೇಳುವುದು" ಎಂದು ವ್ಯಂಗ್ಯ ಮಾಡಿದರು.
"ಜನರು ಹೊಡಿತ್ತಾರೆ ಅನ್ನುತ್ತಾರೆ. ಆದರೆ ಅವರಿಗೆ ಕೈನಿಂದಾನೇ ಹೊಡೆಬೇಕಾಲ್ವ. ಈಗಾಗಲೇ ಜನ ಮತದಾನದ ಮೂಲಕ ಅಧಿಕಾರದಿಂದ ಹೊಡೆದು ಹಾಕಿದ್ದಾರೆ. ಹಾಗಾಗಿ ಕೈನಿಂದ ಯಾರು ಹೊಡೆಬೇಡಿ. ಅವರಿಗೆ ಮತದಾನಸ ಮೂಲಕವೇ ಹೊಡೆದದ್ದು ಸಾಕಾಗಿದೆ. ದೇವೇಗೌಡ್ರು, ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಎಂಪಿ ಚುನಾವಣೆ ವೇಳೆ ಬಿಜೆಪಿ 2 ಸ್ಥಾನವೂ ಬರಲ್ಲ ಎಂದು ಹೇಳಿದ್ದರು. ಆದರೆ ಅವರು ಒಬ್ಬೊಬ್ಬರು ಒಂದೊಂದೆ ಸೀಟು ಮಾತ್ರ ಗೆದ್ದದ್ದು. ಈಗ ಮತ್ತೆ ಡಿಕೆ ಶಿವಕುಮಾರ್ ವ್ಯಂಗ್ಯ ಮಾತನಾಡಿದ್ದಾರೆ. ನಾಳೆ ಅವರಿಗೆ ಫಲಿತಾಂಶವೇ ಪಾಠ ಕಲಿಸಲಿದೆ. ಅವರು ವ್ಯಂಗ್ಯ ಮಾಡ್ತಾನೇ ಇರಲಿ ಜನರು ಬಿಜೆಪಿ ಗೆಲ್ಲಿಸ್ತಾನೇ ಇರಲಿ" ಎಂದು ಪ್ರತಿಕ್ರಿಯೆ ನೀಡಿದರು.