ಬೆಳಗಾವಿ, ಡಿ 08 (Daijiworld News/MB) : "ಬಿಜೆಪಿ ಹಾಗೂ ಜೆಡಿಎಸ್ನವರು ನನ್ನ ಹೆಸರು ಹೇಳುತ್ತಲೇ ಇರುತ್ತಾರೆ. ಯಾಕೆಂದರೆ ಅವರಿಗೆ ನನ್ನನ್ನು ಕಂಡರೆ ಭಯ" ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯ ಮಾಡಿದ್ದಾರೆ.
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತಾನಾಡಿದ ಅವರು, " ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ಸಮೀಕ್ಷೆಗಳು ಏನಾಗಿವೆ ಎಂದು ಎಲ್ಲರಿಗೂ ತಿಳಿದಿದೆ. ಹಾಗಾಗಿ ನಾನು ಉಪಚುನಾವಣೆ ಸಮೀಕ್ಷೆಗಳನ್ನು ನಂಬುವುದಿಲ್ಲ. ಅದು ಅಂದಾಜಿನಲ್ಲಿ ಮಾಡಿದ ಸಮೀಕ್ಷೆಯಾಗಿರುತ್ತದೆ" ಎಂದು ಸ್ಪಷ್ಟಪಡಿಸಿದ್ದಾರೆ.
"ಸರಕಾರವು ನೆರೆ ಪರಿಹಾರದ ಕುರಿತು ಈವರೆಗೂ ತಲೆಕೆಡಿಸಿಕೊಂಡಿಲ್ಲ. ಹತ್ತು ಸಾವಿರ ಮತ್ತು ಒಂದು ಲಕ್ಷ ಕೊಟ್ಟು ಕೈ ತೊಳೆದು ಕೊಂಡಿದ್ದಾರೆ. ಇನ್ನೂ ಅನೇಕ ಜನರಿಗೆ ಹಾಗೂ ರೈತರಿಗೆ ಪರಿಹಾರ ಸಿಕ್ಕಿಲ್ಲ" ಎಂದು ಟೀಕೆ ಮಾಡಿದರು.
ಚುನಾವಣೆ ನಂತರ ಕಾಂಗ್ರೆಸ್ ಕಥೆ ಮುಗಿಯಲಿದೆ ಎಂದು ಹೇಳಿದ ಜಗದೀಶ್ ಶೆಟ್ಟರ್ ಮತ್ತು ಈಶ್ವರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, "ಭ್ರಮೆಯಲ್ಲಿರುವುದು ಈಶ್ವರಪ್ಪ ಮತ್ತು ಜಗದೀಶ್ ಶೆಟ್ಟರ್. ಕಾಂಗ್ರೆಸ್ನ್ನು ಅಂತ್ಯಗಾಣಿಸಲು ಯಾರಿಂದಲೂ ಸಾಧ್ಯವಿಲ್ಲ. ಅವರು ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಎಂಬ ಭ್ರಮೆಯಲ್ಲಿದ್ದಾರೆ" ಎಂದು ವ್ಯಂಗ್ಯ ಮಾಡಿದರು.
"ಕೇಂದ್ರ ಸರ್ಕಾರದಿಂದ ಜಿಎಸ್ಟಿ ಯ ಬಾಕಿ ಹಣ 5600 ಕೋಟಿ ರೂಪಾಯಿ ರಾಜ್ಯ ಸರಕಾರಕ್ಕೆ ಬರಬೇಕಾಗಿದೆ. ಅದು ಬರದೆ ರಾಜ್ಯದಲ್ಲಿ ತೊಂದರೆ ಉಂಟಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಆ ಹಣವನ್ನು ಕೇಳುವ ಬದಲು ಸರಕಾರ ಉರುಳಿಸಲು ಭಜನೆ ಮಾಡಿಕೊಂಡು ಕುಳಿತಿದ್ದಾರೆ" ಎಂದು ಟೀಕಿಸಿದರು.