ರಾಮನಗರ, ಡಿ 09 (Daijiworld News/MB) : "ಜಿಲ್ಲೆಯ ಸರಕಾರಿ ಕಚೇರಿಗಳಲ್ಲಿ 100 ರೂ. ನೋಟಿಗೆ ಯಾವುದೇ ಬೆಲೆ ಇಲ್ಲ, ಪಿಂಕ್ ನೋಟಿಗೆ ಹೆಚ್ಚು ಬೆಲೆ. ಇಂತಹ ವಿಚಾರಗಳಲ್ಲಿ ಕ್ಲೀನಿಂಗ್ ಕೆಲಸವನ್ನು ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ ಅವರು ಮಾಡಲಿ" ಎಂದು ವಿಧಾನಪರಿಷತ್ ಸದಸ್ಯ ಸಿ.ಎಂ ಲಿಂಗಪ್ಪ ಹೇಳಿದ್ದಾರೆ.
ಪತ್ರಿಕಾಗೋಷ್ಠಿ ನಡೆಸಿ ಮಾತಾನಾಡಿದ ಅವರು, "ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥನಾರಾಯಣ ಅವರು ಡಿ.9ರ ಬಳಿಕ ರಾಮನಗರದಲ್ಲಿ ’ಕ್ಲೀನಿಂಗ್’ ಆರಂಭ ಮಾಡುವುದಾಗಿ ಹೇಳಿದ್ದಾರೆ. ಸ್ವಚ್ಛ ಭಾರತ ಕಾರ್ಯಕ್ರಮವನ್ನು ಮೋದಿ ಸರಕಾರ ಆರಂಭ ಮಾಡಿ ನಾಲ್ಕು ವರ್ಷವಾಗಿದೆ. ಜಿಲ್ಲೆಯಲ್ಲಿ ಅವರು ಅದನ್ನು ಮುಂದುವರೆಸುವುದಾದರೆ ನಾವೇ ಅವರಿಗೆ ಪೊರಕೆ, ಫಿನಾಯಿಲ್ ಕೊಡುತ್ತೇವೆ. ಹಾಗೆಯೇ ಪಂಚಾಂಗದಲ್ಲಿ ಸ್ವಚ್ಛತಾ ಕಾರ್ಯಕ್ಕೆ ಒಳ್ಳೆಯ ದಿನವನ್ನು ಹುಡುಕಿ ಕೊಡುತ್ತೇವೆ. ಆದರೆ ಅವರು ಅದನ್ನು ಬಿಟ್ಟು ಡಿ.ಕೆ ಸಹೋದರರ ವಿರುದ್ಧ ವೈಯಕ್ತಿಕ ಟೀಕೆ ಮಾಡಿದರೆ ಅದನ್ನು ನಾವು ಸಹಿಸುವುದಿಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ರೈತರಿಗೆ ಕೆಲವು ಅಧಿಕಾರಿಗಳಿಂದ ಅನ್ಯಾಯವಾಗುತ್ತಿದೆ. ರಾಮನಗರದ ಅಧಿಕಾರಿಯೊಬ್ಬರು ಬಿಡದಿಯ ಎಂ. ಕರೇನಹಳ್ಳಿಯಲ್ಲಿನ ತೋಟಿಗಳ ಏಳು ಕುಟುಂಬಕ್ಕೆ 10 ಎಕರೆ ಭೂಮಿ ಹಂಚಿಕೆ ಮಾಡಲು 10 ಲಕ್ಷ ರೂ. ಲಂಚ ಕೇಳುತ್ತಿದ್ದಾರೆ. ಕ್ಲೀನಿಂಗ್ ಮಾಡಲು ಹೊರಟ ನೀವು ಹೀಗೆ ಇರುವವರನ್ನು ಸ್ವಚ್ಛ ಮಾಡಿ" ಎಂದು ತಿಳಿಸಿದ್ದಾರೆ.
"ಪ್ರಸ್ತುತ ಜಿಲ್ಲಾಧಿಕಾರಿ, ಜಿ.ಪಂ. ಸಿಇಒ, ಎಸ್ಪಿ ಆಗಿರುವ ಎಲ್ಲರೂ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ವರ್ಗಾವಣೆ ಆಗಿ ಬಂದವರು. ಹಾಗಾಗಿ ಇದರಲ್ಲಿ ಡಿಕೆ ಸಹೋದರರ ಯಾವುದೇ ಕೈವಾಡವಿಲ್ಲ. ಈ ಜಿಲ್ಲೆಗೆ ವರ್ಗಾವಣೆ ಮಾಡಲು ಅವರು ಶಿಫಾರಸ್ಸು ಮಾಡಿಲ್ಲ. ಹೀಗಿರುವಾಗ ಈಗ ಯಾವ ವ್ಯವಸ್ಥೆಯನ್ನು ಸಚಿವರು ಸ್ವಚ್ಛ ಮಾಡಬೇಕು" ಎಂದು ಹೇಳಿದ್ದಾರೆ.
"ಡಿಕೆ ಸಹೋದರರು ಎಸ್ಪಿ ಅನೂಪ್ ಶೆಟ್ಟಿ ಕುರಿತು ನೀಡಿದ ಹೇಳಿಕೆ ನಾನು ಬೆಂಬಲ ನೀಡುವುದಿಲ್ಲ. ಹಾಗೆಯೇ ಸಮರ್ಥನೆ ಕೂಡಾ ಮಾಡಿಕೊಳ್ಳುವುದಿಲ್ಲ. ಆ ಹೇಳಿಕೆಗೆ ಸಮರ್ಥನೆ ನೀಡುವಷ್ಟು ಅವರು ಸಮರ್ಥರಾಗಿದ್ದಾರೆ" ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕನಕಪುರ ಮೆಡಿಕಲ್ ಕಾಲೇಜು ವಿಚಾರದ ಕುರಿತು ಮಾತಾನಾಡಿ, "ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲೇ ರಾಮನಗರಕ್ಕೆ ಈಗಾಗಲೇ ರಾಜೀವ್ಗಾಂಧಿ ವಿ.ವಿ. ಘೋಷಿಸಿರುವ ಕಾರಣ ಜಿಲ್ಲೆಯ ಕೋಟಾ ಅಡಿ ಕನಕಪುರಕ್ಕೆ ಮೆಡಿಕಲ್ ಕಾಲೇಜು ನೀಡುವುದು ಎಂದು ತೀರ್ಮಾನ ಆಗಿತ್ತು. ಹಾಗಿರುವಾಗ ಬಿಜೆಪಿ ಸರಕಾರ ಚಿಕ್ಕಬಳ್ಳಾಪುರಕ್ಕೆ ಕೊಟ್ಟಿದ್ದು ಸರಿಯಾದ ವಿಷಯವಲ್ಲ. ಈಗಾಗಲೇ ಈ ವಿಚಾರದ ವಿರುದ್ಧ ಹೋರಾಟ ನಡೆಸುವುದಾಗಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ. ಡಿಕೆಶಿ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಈ ಹೋರಾಟಕ್ಕೆ ಬೆಂಬಲ ಸೂಚಿಸಿ ಅವರೊಂದಿಗೆ ಇರುತ್ತೇವೆ" ಎಂದು ಸ್ಪಷ್ಟಪಡಿಸಿದ್ದಾರೆ.