ಚಿಕ್ಕಬಳ್ಳಾಪುರ, ಡಿ 09 (Daijiworld News/MB) : ಬಂಡಾಯ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಕಳೆದ ಬಾರಿ ಕೇವಲ 3 ಮತಗಳಲ್ಲಿ ಸೋತಿದ್ದು ಈ ಬಾರಿ ಮುನ್ನಡೆ ಪಡೆದಿರುವ ಅವರು ಗೆಲುವಿನತ್ತ ಮುಖ ಮಾಡಿದ್ದಾರೆ.
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, "ಈಗ ಗೆಲುವಿನ ನಿರೀಕ್ಷೆಯಲ್ಲಿದ್ದೇನೆ. ಗೆದ್ದ ಬಳಿಕ ಮತದಾರರ ಅಭಿಪ್ರಾಯ ಕೇಳಿ ಅವರು ಸಮ್ಮತಿ ಸೂಚಿಸಿದರೆ ಬಿಜೆಪಿ ಸೇರ್ಪಡೆಯಾಗುತ್ತೇನೆ" ಎಂದರು.
"ನನಗೆ ಕ್ಷೇತ್ರದ ಮತದಾರರ ಆಶೀರ್ವಾದ ಇದೆ. ನಮ್ಮ ತಂದೆ ಬಿಜೆಪಿಗೆ ಬರುವ ಮೊದಲಿಂದಲೂ ಕೆಲಸಗಳನ್ನು ಮಾಡಿಕೊಂಡೇ ಬಂದಿದ್ದಾರೆ. ಅವರ ಬಿಜೆಪಿಗೆ ಸೇರ್ಪಡೆಯಾದಾಗ, ಮತದಾರರು ಅವರಿಗೂ ಬೆಂಬಲ ಕೊಟ್ಟಿದ್ದರು. ನಮ್ಮ ತಂದೆಯ ಕಾರ್ಯಗಳನ್ನು ಕ್ಷೇತ್ರದ ಜನತೆ ನೋಡಿದ್ದಾರೆ. ಅವರ ನಾಮಬಲ ನನಗಿದೆ" ಎಂದು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.
ಅನರ್ಹರಿಗೆ ಟಿಕೆಟ್ ಕೊಟ್ಟ ಬಿಜೆಪಿ ಪಕ್ಷಕ್ಕೆ ನೀವು ಸೇರುತ್ತಿರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ "ಕೆಲಸ ಮಾಡುವವರಿಗೆ ಟಿಕೆಟ್ ನೀಡಿಲ್ಲ. ಅನರ್ಹರಿಗೆ ನೀಡಿದ್ದಾರೆ. ಈ ಕುರಿತು ಮುಂದಿನ ದಿನಗಳಲ್ಲಿ ತೀರ್ಮಾನ ಮಾಡುತ್ತೇನೆ" ಎಂದು ಹೇಳಿದರು.
ಈ ಮೊದಲು ಸಂಸದ ಬಚ್ಚೇಗೌಡ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡಗೆ ಬೆಂಬಲ ನೀಡುತ್ತಿದ್ದಾರೆ ಎಂದು ಎಂಟಿಬಿ ನಾಗರಾಜ್ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ದೂರು ನೀಡಿದ್ದರು.