ಬೆಂಗಳೂರು, ಡಿ 09 (Daijiworld News/MB) :15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶದಲ್ಲಿ 12 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸುವ ಕುರಿತು ಅಧಿಕೃತ ಘೋಷಣೆ ಆಗಬೇಕಿದೆ.
ಕಾಂಗ್ರೆಸ್ ಕೇವಲ ಎರಡು ಕ್ಷೇತ್ರಗಳಲ್ಲಿ ಮಾತ್ರ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಡಿಕೆ ಶಿವಕುಮಾರ್ ಅವರು, ಉಪಚುನಾವಣೆಯಲ್ಲಿ ಮತದಾರರು ನೀಡುವ ಜನಾದೇಶಕ್ಕೆ ತಲೆಬಾಗುತ್ತೇವೆ" ಎಂದು ತಿಳಿಸಿದ್ದಾರೆ.
"ಪಕ್ಷಾಂತರಿಗಳನ್ನು ಜನರು ಒಪ್ಪಿದ್ದಾರೆ. ನಾವು ನಮ್ಮ ಸೋಲನ್ನು ಒಪ್ಪಿಕೊಂಡಿದ್ದೇವೆ. ಆದರೆ ನಿರಾಸರಾಗುವುದಿಲ್ಲ" ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಬಿಜೆಪಿ ಈಗಾಗಲೇ ಗೆಲುವಿನತ್ತ ಮುಖ ಮಾಡಿದ್ದು, ಬೆಂಗಳೂರು ಗ್ರಾಮಾಂತರ ಕ್ಷೇತ್ರ ಹೊಸಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಗೆಲುವು ಸಾಧಿಸಿದ್ದಾರೆ, ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಸೋಲು ಅನುಭವಿಸಿದ್ದಾರೆ. ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಜನರ ಸಮ್ಮತಿ ದೊರೆತರೆ ಬಿಜೆಪಿ ಸೇರುವ ಚಿಂತನೆಯಲ್ಲಿದ್ದಾರೆ.