ನವದೆಹಲಿ, ಡಿ 09(Daijiworld News/MSP):ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಗಲ್ಲಿಗೇರಿಸುವ ದಿನ ಹತ್ತಿರವಾಗಿದೆ. ಡಿ.16 ರ ಸೋಮವಾರ ಮುಂಜಾನೆ 5 ಗಂಟೆಗೆ ನಿರ್ಭಯಾ ಪ್ರಕರಣದ ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸಲಾಗುವುದು ಎಂದು ತಿಹಾರ್ ಜೈಲು ಅಧಿಕಾರಿಗಳು ತಿಳಿಸಿದ್ದಾರೆ.
2012ರ ಡಿ. 16ರಂದು ದೆಹಲಿಯಲ್ಲಿ 23 ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಮೇಲೆ ಆರು ಮಂದಿ ಸಾಮೂಹಿಕ ಅತ್ಯಾಚಾರಗೈದು, ಕೊಲೆ ಮಾಡಿ ದುರುಳರು ವಿಕೃತಿ ಮೆರೆದಿದ್ದರು. ಈ ಪ್ರಕರಣ ಸಂಬಂಧ ರಾಮ್ ಸಿಂಗ್, ಪವನ್ ಗುಪ್ತಾ, ವಿನಯ್ ಶರ್ಮಾ, ಅಕ್ಷಯ್ ಠಾಕೂರ್, ಮುಕೇಶ್ ಸಿಂಗ್ ಬಂಧಿಸಲಾಗಿತ್ತು. ಆದರೆ 2013ರ ಮಾರ್ಚ್ ನಲ್ಲಿ ತಿಹಾರ್ ಜೈಲಿನಲ್ಲಿಯೇ ರಾಮ್ ಸಿಂಗ್ ಆತ್ಮಹತ್ಯೆಗೆ ಶರಣಾಗಿದ್ದನು. ಬಳಿಕ ಈ ದುಷ್ಟರ ಕೃತ್ಯ ಸಾಬೀತಾಗಿ, ಅವರನ್ನು ದೋಷಿಗಳು ಎಂದು ಪರಿಗಣಿಸಿ ಇನ್ನುಳಿದ ನಾಲ್ವರಿಗೆ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿತ್ತು. ಅವರಲ್ಲಿ ಮೂವರಿಗೆ ಕ್ಷಮಾದಾನ ಕೋರುವ ಯಾವುದೇ ಅವಕಾಶ ಇರಲಿಲ್ಲ. ಹೀಗಾಗಿ ವಿನಯ್ ಶರ್ಮಾಗೆ ಅವಕಾಶವಿದ್ದ ಹಿನ್ನೆಲೆಯಲ್ಲಿ ಆತ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಿದ್ದನು. ಆದರೆ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆರ್ಜಿಯನ್ನು ತಿರಸ್ಕರಿಸುವ ಮೂಲಕ ಶಿಕ್ಷೆ ಜಾರಿಗೆ ಹಸಿರು ನಿಶಾನೆ ತೋರಿಸಿದ್ದರು. ಆರು ಮಂದಿ ಅಪರಾಧಿಗಳಲ್ಲಿ ಓರ್ವ ಆತ್ಮಹತ್ಯೆಗೆ ಶರಣಾದರೆ ಇನ್ನುಳಿದ ಐವರಲ್ಲಿ ಓರ್ವ ಬಾಲಾಪರಾಧಿಯಾಗಿದ್ದ. ಆತ ಬಂಧನದಲ್ಲಿದ್ದಾನೆ.
ಸೋಮವಾರ ಕೇಂದ್ರ ಸರ್ಕಾರದಿಂದ ಆದೇಶ ಪ್ರತಿ ಜೈಲಿನ ಅಧಿಕಾರಿಗಳಿಗೆ ತಲುಪಿದ್ದು, ನಾಲ್ವರು ಅಪರಾಧಿಗಳಳು ವಿಕೃತ ಮೆರೆದ ದಿನವಾದ ಡಿ. 16 ರಂದೇ ಗಲ್ಲಿಗೇರಿಸುವಂತೆ ಆದೇಶ ನೀಡಿದ್ದು ವಿಶೇಷವಾಗಿದೆ. ಅಪರಾಧಿಗಳಿರುವ ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.