ಹುಬ್ಬಳ್ಳಿ, ಡಿ 09 (Daijiworld News/MB) : "ಕಾಂಗ್ರೆಸ್ - ಜೆಡಿಎಸ್ ಪಕ್ಷದವರು ಅಪಪ್ರಚಾರ ಮಾಡಿದ್ದರು. ಅವರ ಆ ಅಪಪ್ರಚಾರವೇ ಬಿಜೆಪಿಗೆ ಗೆಲುವು ನೀಡಿದೆ. ಅವರ ಅಪಪ್ರಚಾರಕ್ಕೆ ಜನರೇ ಅವರಿಗೆ ತಕ್ಕ ಉತ್ತರ ನೀಡಿದ್ದಾರೆ" ಸಚಿವ ಜಗದೀಶ್ ಶೆಟ್ಟರ್ ಎಂದು ಹೇಳಿದರು.
ವಿಧಾನಸಭಾ ಉಪಚುನಾವಣೆ ಹನ್ನೆರಡು ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಜಗದೀಶ ಶೆಟ್ಟರ್ ನಿವಾಸದ ಮುಂಭಾಗದಲ್ಲಿ ಆಯೋಜಿಸಲಾಗಿದ್ದ ವಿಜಯೋತ್ಸವದ ಬಳಿಕ ಮಾತನಾಡಿದ ಅವರು, "ಬಿಜೆಪಿಯನ್ನು 12 ಕ್ಷೇತ್ರಗಳಲ್ಲಿ ಗೆಲ್ಲಿಸುವ ಮೂಲಕ ಜನರು ಕಾಂಗ್ರೆಸ್ ಹಾಗೂ ಜೆಡಿಎಸ್ಗೆ ತಕ್ಕ ಶಾಸ್ತಿ ಮಾಡಿದ್ದಾರೆ. ಇದು ಬಿಜೆಪಿಗೆ ದೊರೆತ ನೈತಿಕ ಗೆಲುವು" ಎಂದು ತಿಳಿಸಿದ್ದಾರೆ.
ಹಾಗೆಯೇ, "ಎಲ್ಲವನ್ನೂ ಪರಿಶೀಲನೆ ಮಾಡಿ ಜನರು ಸ್ಥಿರ ಬಿಜೆಪಿ ಸರಕಾರಕ್ಕೆ ಅಧಿಕಾರ ನೀಡಿದ್ದಾರೆ" ಎಂದು ಹೇಳಿ ಎಲ್ಲಾ ಕ್ಷೇತ್ರದ ಮತದಾರರಿಗೂ ಅಭಿನಂದನೆ ಸಲ್ಲಿಸಿದರು.
"ಸಿದ್ದರಾಮಯ್ಯ ನೇತೃತ್ವದ ಚುನಾವಣೆಯಲ್ಲಿ ಕಾಂಗ್ರೆಸ್ ಪಾರ್ಟಿ ದೊಡ್ಡ ಮಟ್ಟದ ಹಿನ್ನಡೆಯನ್ನು ಅನುಭವಿಸಿದೆ. ಸಿದ್ದರಾಮಯ್ಯ ಅವರು ಗೆಲ್ಲುವ ಕುರಿತು ಚಿಂತೆ ಮಾಡದೆ ವಿರೋಧ ಪಕ್ಷದ ಸ್ಥಾನವನ್ನು ಉಳಿಸಿಕೊಳ್ಳುವ ಕುರಿತು ಚಿಂತೆ ಮಾಡಬೇಕೆಂದು ನಾನು ಕಳೆದ ಸಮಾರಂಭದಲ್ಲಿ ಹೇಳಿದ್ದೆ. ಈಗ ಅದೇ ರೀತಿ ಆಗಿದೆ" ಎಂದು ಹೇಳಿದರು.
"ಈ ಹನ್ನರಡು ಕ್ಷೇತ್ರದಲ್ಲಿನ ಗೆಲುವು ಯಡಿಯೂರಪ್ಪ ಅವರ ಶ್ರಮದ ಕಾರಣದಿಂದ ಲಭಿಸಿದೆ. ಕಾಗವಾಡ ಅಥಣಿ ಭಾಗದಲ್ಲಿ ನನಗೆ ಜವಾಬ್ದಾರಿ ಕೊಟ್ಟಿದ್ದರು. ಅಲ್ಲಿಯೇ ಟಿಕಾಣಿ ಹೂಡಿ ಗೆಲ್ಲಿಸಿಕೊಳ್ಳಲು ಸಾಧ್ಯವಾಯಿತು" ಎಂದರು.