ಬೆಂಗಳೂರು, ಡಿ 09 (Daijiworld News/MSP): ರಾಜ್ಯದ 15 ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ 12 ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರಿದ್ದು ಅಧಿಕಾರವನ್ನು ಭದ್ರಪಡಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಕುಹಕವಾಡಿ ಟ್ವೀಟ್ ಮಾಡುವ ಮೂಲಕ ಬಿಜೆಪಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಇದೊಂದು ”ಅಸಹ್ಯ” ಸರ್ಕಾರ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಮೂದಲಿಸಿದ್ದ ಮಾತಿಗೆ ಸಹಮತ ವ್ಯಕ್ತಪಡಿಸುವಂತೆ ರಾಜ್ಯದ 15 ಕ್ಷೇತ್ರಗಳ ಪ್ರಜ್ಞಾವಂತ ಮತದಾರರು ‘ಪವಿತ್ರ’ ಮತ್ತು ‘ಸುಭದ್ರ’ ಸರ್ಕಾರಕ್ಕೆ ಮುದ್ರೆ ಒತ್ತಿರುವುದಕ್ಕೆ ಮನದಾಳದ ಅಭಿನಂದನೆಗಳು ಎಂದು ಲೇವಡಿ ಮಾಡಿದ್ದಾರೆ.
ಕುಮಾರಸ್ವಾಮಿ ಅವರ ಟ್ವೀಟ್ ಗೆ ಟ್ವೀಟ್ ಮೂಲಕವೇ ಅವರದೇ ಶೈಲಿಯಲ್ಲಿ ಪ್ರತ್ಯುತ್ತರ ನೀಡಿದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ ರವಿ, "ಅಪ್ಪ-ಮಕ್ಕಳ ನಾಟಕ ಕಂಪನಿ ಈ ಬಾರಿ ಎಷ್ಟೇ ಕಣ್ಣೀರು ಸುರಿಸಿದರೂ ನಂಬದ ಪ್ರಜ್ಞಾವಂತ ಮತದಾರರು ಮತ್ತೊಮ್ಮೆ "ಅಪವಿತ್ರ ಮೈತ್ರಿ" ಮತ್ತು "ಅಭದ್ರ ಸರ್ಕಾರ" ರಚಿಸುವ ಕನಸು ಕಂಡವರನ್ನು "ಅಸಹ್ಯ" ಪಟ್ಟುಕೊಳ್ಳುವ ರೀತಿಯಲ್ಲಿ ತಿರಸ್ಕರಿಸಿದ್ದಾರೆ. ಎಡಬಿಡಂಗಿ ರಾಜಕಾರಣ ಮಾಡುವವರ ಠೇವಣಿ ಕಳೆದ ಜನರಿಗೆ ಮನದಾಳದ ಅಭಿನಂದನೆಗಳು " ಎಂದಿದ್ದಾರೆ.