ತೆಲಂಗಾಣ, ಡಿ 09(Daijiworld News/MSP): ಎನ್'ಕೌಂಟರ್ ವಿರುದ್ಧ ರಿಟ್ ಅರ್ಜಿ ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ಪಶುವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳ ಶವಗಳನ್ನು ಡಿಸೆಂಬರ್ 13ರವರೆಗೂ ರಕ್ಷಿಸಿ ಇಡುವಂತೆ ತೆಲಂಗಾಣ ಹೈಕೋರ್ಟ್ ಸೋಮವಾರ ಆದೇಶ ನೀಡಿದ್ದು, ಪ್ರಕರಣದ ವಿಚಾರಣೆಯನ್ನು ಡಿಸೆಂಬರ್ 12ಕ್ಕೆ ಮುಂದೂಡಿದೆ.
ಈ ಹಿಂದೆ ಕೋರ್ಟ್ ಆರೋಪಿಗಳ ಶವದ ಮರಣೋತ್ತರ ಪರೀಕ್ಷೆಯನ್ನು ವಿಡಿಯೊ ಮಾಡಿ, ಅದನ್ನು ಮುದ್ರಿಸಿರುವ ಸಿಡಿ ಅಥವಾ ಪೆನ್ಡ್ರೈವ್ ಅನ್ನು ಮೆಹಬೂಬನಗರ ಜಿಲ್ಲಾ ನ್ಯಾಯಾಧೀಶರಿಗೆ ಸಲ್ಲಿಸಿ. ಮಾತ್ರವಲ್ಲದೆ ಡಿ.9ರ ರಾತ್ರಿ 8ರವರೆಗೆ ಮೃತದೇಹಗಳನ್ನು ಜೋಪಾನವಾಗಿರಿಸಿ'' ಎಂದು ಹೈಕೋರ್ಟ್ ನಿರ್ದೇಶಿಸಿತ್ತು.
ಪಶುವೈದ್ಯೆಯ ಅತ್ಯಾಚಾರ, ಕೊಲೆ ನಡೆದ ಸ್ಥಳದ ಮಹಜರು ನಡೆಸಲು ನಾಲ್ವರು ಆರೋಪಿಗಳನ್ನು ಕಳೆದ ಶುಕ್ರವಾರ ಮುಂಜಾನೆ ಸೈಬರಾಬಾದ್ ಪೊಲೀಸರು ಕರೆದೊಯ್ದಿದ್ದ ವೇಳೆ ನಾಲ್ವರು ಆರೋಪಿಗಳು ಪೊಲೀಸರ ರಿವಾಲ್ವರ್ ಅನ್ನು ಕಸಿದುಕೊಂಡು ಹಲ್ಲೆಗೆ ಯತ್ನಿಸಿ, ಕಲ್ಲು ತೂರಾಟ ನಡೆಸಿದ್ದರು. ಮಾತ್ರವಲ್ಲದೆ ಪರಾರಿಯಾಗಲು ಯತ್ನಿಸಿದ ವೇಳೆ ಗುಂಡಿನ ದಾಳಿ ನಡೆಸಿರುವುದಾಗಿ ಪೊಲೀಸರು ಆರೋಪಿಸಿದ್ದರು.