ಬೆಂಗಳೂರು, ಡಿ ೦09 (DaijiworldNews/SM): ರಾಜ್ಯದಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ್ದು, ಬಿಜೆಪಿ ಸರಕಾರ ಹಾಗೂ ಕೇಂದ್ರದ ನರೇಂದ್ರ ಮೋದಿ ಸರಕಾರದ ಮೇಲೆ ಭರವಸೆ ಇಟ್ಟು ಜನತೆ ಮತದಾನ ಮಾಡಿದ್ದಾರೆ. ಅವರಿಗೆ ಅಭಿನಂದನೆಗಳು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಕೇಂದ್ರದಲ್ಲಿ ನರೇಂದ್ರ ಮೋದಿ ಮತ್ತು ಯಡಿಯೂರಪ್ಪ ಅವರ ನೇತೃತ್ವದ ರಾಜ್ಯ ಸರ್ಕಾರದ ಸಾಧನೆಗಳನ್ನು ಜನ ಸ್ವೀಕರಿಸಿದ್ದಾರೆ. ಅದೇ ಕಾರಣದಿಂದಾಗಿ ಉಪಚುನಾವಣೆಯಲ್ಲಿ ಬಿಜೆಪಿಗೆ ಜನತೆ ಸ್ಪಷ್ಟ ಬಹುಮತವನ್ನು ನೀಡಿದ್ದಾರೆ. ಮಹತ್ವದ ಸಂದರ್ಭದಲ್ಲಿ ಜನತೆ ಬಿಜೆಪಿಗೆ ಸ್ಪಷ್ಟ ಬಹುಮತ ನೀಡಿದ್ದಾರೆ. ಆ ಮೂಲಕ ಬಿಜೆಪಿ ಸರಕಾರದ ಅಭಿವೃದ್ಧಿ ಕಾರ್ಯಗಳನ್ನು ಜನತೆ ಒಪ್ಪಿಕೊಂಡಿದ್ದಾರೆ.
ಕೇಂದ್ರದಲ್ಲಿ ಬಿಜೆಪಿ ಸರಕಾರ ಇದೆ. ಅದೇ ರೀತಿ ರಾಜ್ಯದಲ್ಲೂ ಬಿಜೆಪಿ ಸರಕಾರಕ್ಕೆ ಜನತೆ ಬಹುಮತ ನೀಡುವ ಮೂಲಕ ಅಧಿಕಾರ ನೀಡಿದ್ದು, ಇದರಿಂದ ಕೇಂದ್ರದ ಅನುದಾನ ರಾಜ್ಯಕ್ಕೆ ವಿತರಣೆಯಾಗಲು ಸಹಕಾರಿಯಾಗಿದೆ ಎಂದರು.