ನವದೆಹಲಿ, ಡಿ 10 (Daijiworld News/MB) : ತೀವ್ರ ವಿರೋಧದ ನಡುವೆಯು ಪೌರತ್ವ (ತಿದ್ದುಪಡಿ) ಮಸೂದೆ ಲೋಕಸಭೆಯಲ್ಲಿ ಅಂಗೀಕಾರವಾಗಿದೆ.
ಅಮಿತ್ ಶಾ ಸಂಸತ್ ನಲ್ಲಿ ಡಿ.09 ರಂದು ಬೆಳಿಗ್ಗೆ ಪೌರತ್ವ ತಿದ್ದುಪಡಿ ಮಸೂದೆ ಮಂಡಿಸಿದ್ದರು. ಗೃಹ ಸಚಿವರು ಮಸೂದೆ ಮಂಡನೆ ಮಾಡುತ್ತಿದ್ದಂತೆಯೇ ಸದನದಲ್ಲಿ ತೀವ್ರ ವಿರೋಧ ವ್ಯಕ್ತವಾಯಿತು. ಈ ಸುದೀರ್ಘ ಚರ್ಚೆಯ ಬಳಿಕ ಮಧ್ಯರಾತ್ರಿಯಲ್ಲಿ ಮಸೂದೆ ಅಂಗೀಕಾರವಾಗಿದೆ.
ಸದನದಲ್ಲಿದ್ದ ಹಾಜರಿದ್ದ 391 ಸದಸ್ಯರ ಪೈಕಿ 311 ಸದಸ್ಯರು ಮಸೂದೆಯ ಪರವಾಗಿ ಹಾಗೂ 80 ಸದಸ್ಯರು ವಿರುದ್ಧವಾಗಿ ಮತಚಲಾವಣೆ ಮಾಡಿದರು.
ಮಸೂದೆಗೆ ಸಂಬಂಧಿಸಿ ಲೋಕಸಭೆಯಲ್ಲಿ ಸುದೀರ್ಘ ಚರ್ಚೆ ನಡೆದಿದ್ದು ಆನಂತರ ಮಧ್ಯರಾತ್ರಿಯಲ್ಲಿ ಅಂಗೀಕಾರವಾಗಿದೆ.
ಮಸೂದೆಯ ಮೇಲೆ ತೀವ್ರ ವಿರೋಧ ವ್ಯಕ್ತಪಡಿಸಿದ ಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಅವರು ಮಸೂದೆಯ ಪ್ರತಿಯನ್ನು ಹರಿದು ಹಾಕಿ ವಿರೋಧ ವ್ಯಕ್ತಪಡಿಸಿದರು.
ಪೌರತ್ವ ತಿದ್ದುಪಡಿ ಮಸೂದೆಯ ಪ್ರಕಾರ ಪಾಕಿಸ್ಥಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ಥಾನದಿಂದ ಬರುವ ವಲಸಿಗರಿಗೆ ಭಾರತೀಯ ಪೌರತ್ವ ನೀಡಲಾಗುತ್ತದೆ. ಈ ಮೂರು ದೇಶಗಳಿಂದ ಬರುವ ಮುಸ್ಲಿಮರನ್ನು ಹೊರತುಪಡಿಸಿ ಹಿಂದೂಗಳು, ಸಿಖ್, ಜೈನರು, ಬೌದ್ಧರು, ಪಾರ್ಸಿ ಹಾಗೂ ಕ್ರಿಶ್ಚಿಯನ್ ಸಮುದಾಯದವರಿಗೆ ಭಾರತೀಯ ಪೌರತ್ವ ನೀಡಲಾಗುತ್ತದೆ. ಮುಸ್ಲಿಮರನ್ನು ಮಾತ್ರ ಹೊರಗಡೆ ಇಟ್ಟಿರುವುದು ಸಂವಿಧಾನ ವಿರೋಧಿ ಧೋರಣೆಯಾಗಿದ್ದು ಇದು ಸರಿಯಲ್ಲ ಎಂದು ವಿಪಕ್ಷಗಳು ಪ್ರತಿಕ್ರಿಯೆ ನೀಡಿದೆ. ಈ ಕುರಿತು ಕೇಂದ್ರ ಸರಕಾರವು ಈ ಮೂರು ದೇಶಗಳಲ್ಲಿ ಹಿಂದೂಗಳು, ಸಿಖ್, ಜೈನರು, ಬೌದ್ಧರು, ಪಾರ್ಸಿ ಹಾಗೂ ಕ್ರಿಶ್ಚಿಯನ್ ಸಮುದಾಯ ಅಲ್ಪಸಂಖ್ಯಾತ ಸಮುದಾಯವಾಗಿದ್ದು ಇವರಿಗೆ ಕಿರುಕುಳ ನೀಡಲಾಗುತ್ತಿದೆ. ಆ ಹಿನ್ನಲೆಯಲ್ಲಿ ಇವರಿಗೆ ಭಾರತದ ಪೌರತ್ವ ನೀಡುವ ಅವಶ್ಯಕತೆ ಇದೆ ಎಂದು ತಿಳಿಸಿದೆ.