ನವದೆಹಲಿ, ಡಿ 10 (Daijiworld News/MSP): ಅಕ್ಕಿ, ಹಾಲು, ತುಪ್ಪ, ಮುಂತಾದ ಆಹಾರದಲ್ಲಿ ಪದಾರ್ಥಗಳಲ್ಲಿ ನಕಲಿ ಅಥವಾ ಕಲಬೆರಕೆ ಬಂದಿರುವುದು ಎಲ್ಲರಿಗೂ ತಿಳಿದಿರುವ ವಿಚಾರವೇ ಸರಿ, ಆದರೆ ಅದಕ್ಕೀಗ ಹೊಸ ಸೇರ್ಪಡೆ, ನಕಲಿ ಜೀರಿಗೆ! ಹೌದು, ಜೀರಿಗೆ ಕಾಳನ್ನೂ ಬಿಟ್ಟಿಲ್ಲದ ಖದೀಮರು ನಕಲಿ ಜೀರಿಗೆ ತಯಾರಿಸುತ್ತಿದ್ದಾರೆ. ಇದಕ್ಕಾಗಿ ವಂಚಕರು ಕಂಡುಕೊಂಡು ಮಾರ್ಗ ನಿಜಕ್ಕೂ ದಂಗಾಗಿಸುತ್ತದೆ. ನಕಲಿ ಜೀರಿಗೆಯನ್ನು ಹುಲ್ಲು , ಮಾರಕ ರಾಸಾಯನಿಕ ಬಳಸಿ ತಯಾರಿಸಲಾಗುತ್ತದೆ. ಕಲ್ಲುಗಳನ್ನು ಸಹ ಬಳಸುತ್ತಾರೆ. ಇದು ನೇರವಾಗಿ ಕ್ಯಾನ್ಸರ್ ಅನ್ನು ಉತ್ತೇಜಿಸುತ್ತದೆ. ಅಲ್ಲದೆ, ಮೂತ್ರಪಿಂಡದ ಮೇಲೆ ಪರಿಣಾಮ ಬೀರುತ್ತದೆ. ಕಲಬೆರಕೆ ಜೀರಿಗೆಯಿಂದ ಯಕೃತ್ತು ಹಾನಿಯಾಗುತ್ತದೆ.
ಈ ವಿಚಾರ ಬೆಳಕಿಗೆ ಬಂದಿದ್ದು ಲಕ್ನೋ ಪೊಲೀಸರು ಕೈಗೆ ದಂಧೆಕೋರರು ಸೆರೆಸಿಕ್ಕಾಗ..ರಾಯ್ ಬರೇಲಿಯ ಮಹಾರಾಜ್ಗಂಜ್ ಪ್ರದೇಶದಲ್ಲಿ ನಕಲಿ ಜೀರಿಗೆ ತಯಾರಿಸುತ್ತಿದ್ದವರನ್ನು ಸೆರೆಹಿಡಿದಿದ್ದು ಏಳು ಜನರ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ನಕಲಿ ಜೀರಿಗೆ ತಯಾರಿಸಿದ್ದು ಹೀಗೆ : ಜೀರಿಗೆ ಕಾಳಿಗೆ 'ನಕಲಿ ಜೀರಿಗೆ'ಯನ್ನು ಕಲಬೆರೆಕೆ ಮಾಡಿ ರಾಜ್ಯದ ವಿವಿಧ ನಗರಗಳಿಗೆ ಸಾಗಿಸಬೇಕಾಗಿದ್ದ ಸುಮಾರು 30,000 ಕೆಜಿ ನಕಲಿ 'ಜೀರಿಗೆ' ವನ್ನು ಲಕ್ನೋ ಪೊಲೀಸರು ವಶಪಡಿಸಿಕೊಂಡಿದ್ದು, ಇವುಗಳನ್ನು ಮಾರುಕಟ್ಟೆ ಮೌಲ್ಯ "60 ಲಕ್ಷ " ರೂಪಾಯಿ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಈ ಗ್ಯಾಂಗ್ ನಕಲಿ ಜೀರಿಗೆ ತಯಾರಿಸುತ್ತಿದ್ದ ರೀತಿ ಯಾರಿಗಾದರೂ ದಂಗುಬಡಿಯುವಂತದ್ದು.! ನಕಲಿ ಜೀರಿಗೆಗಾಗಿ ತೆಂಗಿನ ಪೊರಕೆ, ಮೊಲಾಸಸ್, ಪೊರಕೆಗೆ ಬಳಸುವ ಹುಲ್ಲು, ಮತ್ತು ಕಲ್ಲಿನ ಪುಡಿಗಳನ್ನು ಬಳಸಿ ತಯಾರಿಸುತ್ತಿದ್ದರು.
ಮೊದಲನೆಯದಾಗಿ, ಪೊರಕೆ ತಯಾರಿಸುವ ಹುಲ್ಲನ್ನು ಶೇಖರಿಸುತ್ತಾರೆ.ನಂತರ ಅದನ್ನು ಪುಡಿ ಮಾಡುತ್ತಾರೆ, ಆಮೇಲೆ (ಮೊಲಾಸಸ್ )ಬೆಲ್ಲವನ್ನು ಬಿಸಿ ಮಾಡಿ ಪಾಕ ತಯಾರಿಸುತ್ತಾರೆ. ಇದನ್ನು ಮೊಲಾಸಸ್’ಗಳೊಂದಿಗೆ ಬೆರೆಸಿ ಅದಕ್ಕೆ ಹುಲ್ಲಿನ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡುತ್ತಾರೆ. ಸ್ವಲ್ಪ ಸಮಯದವರೆಗೆ ಒಣಗಿಸುತ್ತಾರೆ. ನಂತರ ಕಲ್ಲಿನ ಪುಡಿಯನ್ನು ಇದಕ್ಕೆ ಸೇರಿಸಿ ಕಲೆಸುತ್ತಾರೆ! ಆಮೇಲೆ ಅದನ್ನು ಕಬ್ಬಿಣದ ದೊಡ್ಡ ಜರಡಿಯಿಂದ ಜರಡಿ ಹಿಡಿದರೆ ನಕಲಿ ಜೀರಿಗೆ ರೆಡಿ ಟು ಸೇಲ್!
ಕಲಬೆರಕೆ : ಅವರು ನೇರವಾಗಿ ನಕಲಿ ಜೀರಿಗೆ ಮಾರಾಟ ಮಾಡುವುದಿಲ್ಲ, 80 ಕೆಜಿ ನಿಜವಾದ ಜೀರಿಗೆಯಲ್ಲಿ 20 ಕೆಜಿ ನಕಲಿಯನ್ನು ಬೆರೆಸಿ ಮಾರಾಟ ಮಾಡುತ್ತಿದ್ದರಂತೆ. ಈ ಕಲಬೆರಕೆ ಕೆಲಸದಿಂದ ಗ್ಯಾಂಗ್ ನೂರು ಕಿಲೋ ಗ್ರಾಂ ಜೀರಿಗೆ ಮೇಲೆ ಎಂಟು ಸಾವಿರ ರೂಪಾಯಿ ಲಾಭವಾಗುತ್ತಿತ್ತು
ಗ್ಯಾಂಗ್ ಸೆರೆಸಿಕ್ಕಿದ್ದು ಹೇಗೆ ?
ದೆಹಲಿ ಪೊಲೀಸರು ಕಳೆದ ತಿಂಗಳಷ್ಟೇ ಇಂತಹ ಪ್ರಕರಣ ಭೇದಿಸಿದ್ದರು, ಹೀಗಾಗಿ ಲಕ್ನೋ ಪೊಲೀಸರು ಕೆಲವರ ಮೇಲೆ ಅನುಮಾನ ವ್ಯಕ್ತಪಡಿಸಿ ತನಿಖೆಗೆ ಮುಂದಾದರು.ಆರೋಪಿಗಳ ಜಾಡು ಹಿಡಿದು ಸಾಗಿದಾಗ ಅತಿದೊಡ್ಡ ಕಲಬೆರಕೆ ದಂಧೆ ಬಯಲಾಗಿದೆ. ಮಹಾರಾಜಗಂಜ್ ನಲ್ಲಿ ಆರೋಪಿಗಳು ಪೊರಕೆ ತಯಾರಿಸಲು ಬಳಸುವ ಹುಲ್ಲನ್ನು ಮುಗಿಬಿದ್ದು ಖರೀದಿಸುತ್ತಿದ್ದರು, ಆದರೆ ಇವರು ಪೊರಕೆ ತಯಾರಿಕೆಗಾಗಿ ಈ ಹುಲ್ಲು ಬಳಸುತ್ತಿಲ್ಲ ಎಂಬ ಅನುಮಾನ ಪೊಲೀಸರಿಗೆ ದೃಢವಾಗತೊಡಗಿತು. ಇದರ ಜಾಡು ಹಿಡಿದು ಹೊರಟ ಪೊಲೀಸರಿಗೆ ನಕಲಿ ಜೀರಿಗೆ ಭಯಾನಕ ದಂಧೆ ಬಯಲಾಯಿತು. ಈ ಗ್ಯಾಂಗ್ ನಕಲಿ ಜೀರಿಗೆ ಬೀಜಗಳನ್ನು ಮಾರಾಟ ಮಾಡುವ ಮೂಲಕ 50 ರಿಂದ 60ಕ್ಕೂ ಹೆಚ್ಚು ಪಟ್ಟು ಲಾಭ ಗಳಿಸುತ್ತಾರೆ ಎಂಬುದು ತನಿಖೆಯಲ್ಲಿ ಬಯಲಾಗಿದೆ.
ಈ ಗ್ಯಾಂಗ್ ನ ನ ಪ್ರಮುಖ ಆರೋಪಿಗಳಾದ ಮಹಾರಾಜಗಂಜ್ ಪ್ರದೇಶದ ನಿವಾಸಿಗಳಾದ ಪ್ರಶಾಂತ್ ಸಾಧು, ಕಮಲೇಶ್ ಮೌರ್ಯ, ಪಂಕಜ್ ವರ್ಮಾ, ಇಂದ್ರಜೀತ್, ಪವನ್ ಗುಪ್ತಾ, ರಾಜೇಂದ್ರ ಪ್ರಸಾದ್ ಮತ್ತು ಚೋಟೆಲಾಲ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು, ಪರಾರಿಯಾಗಿರುವ ಆರೋಪಿಗಳನ್ನು ಬಂಧಿಸಲು ಎರಡು ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಲಕ್ನೋ ಪೊಲೀಸ್ ಅಧಿಕಾರಿ ಹೇಳಿದ್ದಾರೆ.