ಬೆಂಗಳೂರು, ಡಿ 10 (Daijiworld News/MSP): 15 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ 12 ಸ್ಥಾನ ತನ್ನದಾಗಿಸಿಕೊಂಡರೆ, ಕಾಂಗ್ರೆಸ್ ಕೇವಲ ಎರಡು ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. ಉಪ ಚುನಾವಣೆಯಲ್ಲಿ ನಡೆದ ೧೫ ಕ್ಷೇತ್ರಗಳ ಪೈಕಿ 11 ಕ್ಷೇತ್ರಗಳು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಾಗಿತ್ತು ಆದರೆ ಈ ಪೈಕಿ ಕಾಂಗ್ರೆಸ್ ತನ್ನ ಬಳಿ ಉಳಿಸಿಕೊಳ್ಳಲು ಶಕ್ತವಾಗಿದ್ದು ಕೇವಲ 2 ಸ್ಥಾನ. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ನೀರಸ ಪ್ರದರ್ಶನ ನೀಡಲು ಕಾರಣ ಏನು? ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆ ಯಾಕೆ ಈ ಮಟ್ಟದ ಸೋಲುಂಟಾಗಿದೆ? ಹೀಗೆ ಎಲ್ಲವನ್ನು ವಿವರವಾಗಿ ಬಹಿರಂಗಪಡಿಸುತ್ತೇನೆ ಎಂದು ಕಾಂಗ್ರೆಸ್ ನಾಯಕ ಮಾಜಿ ಸಚಿವ ಡಿ ಕೆ ಶಿವಕುಮಾರ್ ಅವರು ಹೇಳಿದರು.
ಬೆಂಗಳೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜೀನಾಮೆಯ ವಿಚಾರವಾಗಿ ನಾನು ಈಗ ಏನೂ ಹೇಳಲ್ಲ. ನಾನೀಗ ಕೋರ್ಟ್ ಗೆ ಹೋಗುತ್ತಿದ್ದು ಸಮಯ ಸಿಕ್ಕಾಗ ಎಲ್ಲವನ್ನೂ ವಿವರವಾಗಿ ಮಾತನಾಡ್ತೇನೆ ಎಂದು ಹೇಳಿದರು.
ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆ ಯಾಕೆ ಹಿನ್ನಡೆಯಾಯಿತು ಎಂದು ತಕ್ಷಣ ಏನನ್ನೂ ಹೇಳುವುದಿಲ್ಲ. ಆದರೆ ಹಿನ್ನಡೆ ಯಾಕಾಯಿತು? ಹೇಗಾಯಿತು? ಇವೆಲ್ಲಾ ವಿವರಗಳನ್ನು ನಾನು ಸಂಪೂರ್ಣವಾಗಿ ಹೇಳುತ್ತೇನೆ ಎಂದರು.