ಬೆಂಗಳೂರು, ಡಿ 10 (Daijiworld News/MSP): "ನಾನು ಕೊಟ್ಟ ಮಾತಿಗೆ ಬದ್ದನಾಗಿದ್ದು, ಇನ್ನೆರಡು ದಿನಗಳಲ್ಲಿ ಸಂಪುಟ ವಿಸ್ತರಣೆ ಮಾಡುತ್ತೇನೆ" ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ನಿಜಲಿಂಗಪ್ಪರವರ 117ನೇ ಜನ್ಮ ದಿನದ ಅಂಗವಾಗಿ ಅವರ ಪ್ರತಿಮೆ ಬಳಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, “ ಉಪಚುನಾವಣೆಯ 15 ಕ್ಷೇತ್ರಗಳ ಪೈಕಿ ಬಿಜೆಪಿ 12ರಲ್ಲಿ ದೊಡ್ಡಮಟ್ಟದ ಅಂತರದಿಂದ ಗೆಲುವು ದೊರೆತಿದ್ದು, ಗೆಲುವು ಸಾಧಿಸಿರುವ ಎಲ್ಲಾ ಶಾಸಕರಿಗೂ ಸಚಿವ ಸ್ಥಾನ ನೀಡುತ್ತೇವೆ. ಅವರಿಂದಲೇ ಸುಭದ್ರ ಸರ್ಕಾರವಾಗಿ ಮುಂದುವರೆಯಲು ಅವಕಾಶ ದೊರಕಿದೆ. ಇನ್ನು ರಾಜ್ಯದ ಅಭಿವೃದ್ಧಿ ಕಡೆಗೆ ಹೆಚ್ಚಿನ ಗಮನ ನೀಡಬೇಕಿದೆ" ಎಂದರು.
ವಿಧಾನಮಂಡಲವನ್ನು ಪ್ರವೇಶಿಸುವವರೆಗೆ ಯಾವುದೇ ಲಾಭದಾಯಕ ಹುದ್ದೆಗಳನ್ನು ಅನರ್ಹ ಶಾಸಕರು ಹೊಂದುವಂತಿಲ್ಲ ಎಂದು ಸುಪ್ರೀಂ ತೀರ್ಪು ಸ್ಪಷ್ಟವಾಗಿ ಹೇಳಿರುವ ಕಾರಣ ಉಪಚುನಾವಣೆಯಲ್ಲಿ ಸೋತ ಎಚ್.ವಿಶ್ವನಾಥ್ ಮತ್ತು ಎಂಟಿಬಿ ನಾಗರಾಜ್ ಹಾಗೂ ಚುನಾವಣೆಗೆ ಸ್ಪರ್ಧಿಸದವರ ರೋಷನ್ ಬೇಗ್ ಮತ್ತು ಆರ್.ಶಂಕರ್ ಯಾವ ಸ್ಥಾನಮಾನ ನೀಡಲಾಗುತ್ತದೆ ಎನ್ನುವುದೇ ಕುತೂಹಲವಾಗಿದೆ.