ಗುಹಾವತಿ, ಡಿ 10 (Daijiworld News/MB) : ತೀವ್ರ ಆಕ್ಷೇಪ ವ್ಯಕ್ತವಾಗಿದ್ದ ಪೌರತ್ವ ತಿದ್ದುಪಡಿ ಮಸೂದೆ ಅನುಮೋದನೆಗೊಂಡ ಬೆನ್ನಲ್ಲೇ ಈಶಾನ್ಯ ಭಾರತದ ರಾಜ್ಯಗಳಲ್ಲಿ ತೀವ್ರ ಪ್ರತಿಭಟನೆಗಳು ಆರಂಭವಾಗಿದೆ.
ಬೆಳಿಗ್ಗೆ 5 ಗಂಟೆಗೆ ಆರಂಭವಾದ ಬಂದ್ ಸಂಜೆ 4ರವರೆಗೆ ನಡೆಯಲಿದೆ. ಈಶಾನ್ಯ ಪ್ರದೇಶದ ಅಸ್ಸಾಮ್, ಅರುಣಾಚಲ, ಮೇಘಾಲಯ, ಮಿಜೋರಾಮ್ ಮತ್ತು ತ್ರಿಪುರಾ ರಾಜ್ಯಗಳಲ್ಲಿ ಪ್ರತಿಭಟನಾಕಾರರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
ಸೋಮವಾರ ಮಸೂದೆ ಮಂಡನೆ ಮಾಡಿದ ಗೃಹ ಸಚಿವ ಅಮಿತ್ ಶಾ "ಇನ್ನರ್ ಲೈನ್ ಪರ್ಮಿಟ್ ವ್ಯವಸ್ಥೆಗೆ ಅನುವು ಮಾಡಿ ಕೊಡುವುದಾಗಿ ಹೇಳಿದ್ದು ಇದರಿಂದ ಆಕ್ರೋಶಗೊಂಡ ಈಶಾನ್ಯ ರಾಜ್ಯದ ಜನತೆ ಪ್ರತಿಭಟನೆ ನಡೆಸುತ್ತಿದ್ದಾರೆ.
ಪೌರತ್ವ ಮಸೂದೆಯಲ್ಲಿ ಇನ್ನರ್ ಲೈನ್ ಪರ್ಮಿಟ್, ಅಂದರೆ ಒಳ ಪ್ರದೇಶ ಭೇಟಿಗೆ ಅವಕಾಶ ಕಲ್ಪಿಸುವ ಅಂಶವನ್ನು ಸೇರಿಸಲಾಗಿದ್ದು ಈ ವ್ಯವಸ್ಥೆ ಜಾರಿಗೆ ಬಂದಲ್ಲಿ ಈಶಾನ್ಯ ರಾಜ್ಯದ ಸೂಕ್ಷ್ಮ ಸಾಂಸ್ಕೃತಿಕ ಹಾಗೂ ವಾತಾವರಣಕ್ಕೆ ಧಕ್ಕೆಯಾಗುತ್ತದೆ ಎಂಬ ಹಿನ್ನಲೆಯಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ.
ಮಣಿಪುರದಲ್ಲಿ ಇಂದಿನ ಪ್ರತಿಭಟನೆ ನೇತೃತ್ವವನ್ನು ಪೌರತ್ವ ಮಸೂದೆ ವಿರೋಧಿ ಸಂಘಟನೆ MANPAK ವಹಿಸಿದೆ. ಹಾಗೆಯೇ ಬೇರೆ ರಾಜ್ಯಗಳಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಕಾಂಗ್ರೆಸ್, ಎಐಯುಡಿಎಫ್, ಎಎಎಸ್ಯು, ಕೃಷಕ್ ಮುಕ್ತಿ ಸಂಗ್ರಾಮ್ ಸಮಿತಿ, ಎಎಪಿಎಸ್ಯು, ಖಾಸಿ ವಿದ್ಯಾರ್ಥಿ ಒಕ್ಕೂಟ, ನಾಗಾ ವಿದ್ಯಾರ್ಥಿ ಒಕ್ಕೂಟಗಳು ಹಾಗೂ ಹಲವು ಎಡಪಂಥೀಯ ಸಂಘಟನೆಗಳು ಈ ಬಂದ್ಗೆ ಬೆಂಬಲ ವ್ಯಕ್ತಪಡಿಸಿವೆ.
ಗುವಾಹತಿಯಲ್ಲಿ ಪ್ರತಿಭಟನೆ ತೀವ್ರ ಮಟ್ಟದಲ್ಲಿದೆ. ಪ್ರತಿಭಟನಾಕಾರರು ಹಲವು ಕಡೆ ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೂ ಹಲವು ಕಡೆಗಳಲ್ಲಿ ಪ್ರತಿಭಟನಾಕಾರರು ಬೆಳಗ್ಗೆ 5ಗಂಟೆಗೆ ಟಾರ್ಚ್ ಲೈಟ್ ಮೆರವಣಿಗೆ ನಡೆಸಿದ್ದಾರೆ.