ನವದೆಹಲಿ, ಡಿ 10 (Daijiworld News/ MB) : ಸಾಮಾಜಿಕ ಹೋರಾಟಗಾರ ಅಣ್ಣ ಹಜಾರೆ ಈ ದೇಶದಲ್ಲಿ ಮಹಿಳೆಯರ ಮೇಲೆ ಆಗುತ್ತಿರುವ ಅತ್ಯಾಚಾರ ಹಾಗೂ ಹತ್ಯೆಗಳ ವಿರುದ್ಧ ಆತಂಕ ವ್ಯಕ್ತ ಪಡಿಸಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದು ಅತೀ ಶೀಘ್ರವಾಗಿ ನಿಭರ್ಯಾ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಡಿಸೆಂಬರ್ 20ರಿಂದ ಮೌನ ವ್ರತ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
2016ರ ಡಿಸೆಂಬರ್ ತಿಂಗಳಲ್ಲಿ ದೆಹಲಿಯಲ್ಲಿ ಯುವತಿಯೊಬ್ಬಳನ್ನು ಬಸ್ನಲ್ಲಿ 4 ಜನರು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಆಸ್ಪತ್ರೆಯಲ್ಲಿ ದಾಖಲಾಗಿದ್ದ ಯುವತಿ ಕೆಲವೇ ದಿನಗಳಲ್ಲಿ ಕೊನೆಯುಸಿರೆಳೆದಿದ್ದಳು. ಆ ಪೈಕಿ ನಾಲ್ವರಿಗೆ ಗಲ್ಲುಶಿಕ್ಷೆಯನ್ನು ವಿಧಿಸಲಾಗಿದೆ.
ಹೈದರಾಬಾದ್ ಎನ್ಕೌಂಟರ್ಗೆ ಜನರು ಶ್ಲಾಘನೆ ವ್ಯಕ್ತಪಡಿಸಿದ ಕುರಿತು ಮಾತಾನಾಡಿದ ಅವರು, "ಜನರು ಈ ರೀತಿ ಶ್ಲಾಘನೆ ವ್ಯಕ್ತಪಡಿಸಿದ್ದರಿಂದ ನ್ಯಾಯವು ಶೀಘ್ರವಾಗಿ ದೊರೆಯದ ಹಿನ್ನಲೆಯಲ್ಲಿ ಜನರು ನ್ಯಾಯಾಂಗದ ಮೇಲೆ ನಂಬಿಕೆಯನ್ನು ಕಳೆದುಕೊಂಡಿದ್ದಾರೆ ಎಂಬುದು ತಿಳಿದು ಬರುತ್ತದೆ" ಎಂದು ಹೇಳಿದ್ದಾರೆ.
"ನಿರ್ಭಯಾ ಅತ್ಯಾಚಾರ ಪ್ರಕರಣದ ನಾಲ್ವರು ಆರೋಪಿಗಳಿಗೆ ಸುಪ್ರೀಂಕೋರ್ಟ್ ಗಲ್ಲುಶಿಕ್ಷೆ ವಿಧಿಸಿದ್ದು, ಶಿಕ್ಷೆಗೆ ಗುರಿಪಡಿಸುವಲ್ಲಿ ಸರ್ಕಾರ ತಡ ಮಾಡುತ್ತಿದೆ" ಎಂದು ಅಣ್ಣಾ ಹಜಾರೆ ಆರೋಪಿಸಿದ್ದಾರೆ.
"2004ರಲ್ಲಿ ಧನಂಜಯ್ ಚಟರ್ಜಿ ಎಂಬ ಅತ್ಯಾಚಾರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಆನಂತರ ಎಷ್ಟೋ ಅತ್ಯಾಚಾರ ಪ್ರಕರಣ ನಡೆದಿದೆ. ಆದರೆ ತೀರ್ಪು ಮಾತ್ರ ತಡವಾಗುತ್ತಿದೆ. 2004ರ ನಂತರ ಒಟ್ಟು 429 ಅಪರಾಧಿಗಳಿಗೆ ಮರಣದಂಡನೆ ವಿಧಿಸಲಾಗಿದೆ. ಆದರೆ ಯಾರಿಗೂ ಗಲ್ಲು ಶಿಕ್ಷೆ ವಿಧಿಸಿಲ್ಲ" ಎಂದು ತಿಳಿಸಿದ್ದಾರೆ.
"ಮಹಿಳೆಯರ ವಿರುದ್ಧ ಅಪರಾಧಗಳು ಹೆಚ್ಚುತ್ತಲ್ಲೇ ಇರುವುದು ಆಘಾತಕಾರಿ ಸಂಗತಿ. ನಿರ್ಭಯಾ ಅತ್ಯಾಚಾರ ಪ್ರಕರಣಕ್ಕೆ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಕಾನೂನಿನಲ್ಲಿ ಕಾಯಿದೆ ಹಾಗೂ ತಿದ್ದುಪಡಿ ತರಲಾಗಿದೆ. ಆದರೆ ಇನ್ನೂ ನಿರ್ಭಯಾಳಿಗೆ ನಾವು ನ್ಯಾಯ ದೊರಕಿಸಿ ಕೊಡಲಿಲ್ಲ. ಸುಮಾರು 6 ಲಕ್ಷದಷ್ಟು ಅತ್ಯಾಚಾರ ಪ್ರಕರಣದ ತನಿಖೆ ಇನ್ನೂ ಕೋರ್ಟ್ನಲ್ಲಿ ನ್ಯಾಯಾಕ್ಕಾಗಿ ಕಾಯುತ್ತಿದೆ" ಎಂದು ಸ್ಪಷ್ಟ ಪಡಿಸಿದ್ದಾರೆ.
ಹಾಗೆಯೇ ಮಹಿಳೆಯರ ರಕ್ಷಣೆಗೆಂದು ಸರಕಾರ ಕೈಗೊಂಡಿರುವ ಕ್ರಮಗಳ ಕುರಿತು "ಮಹಿಳೆಯರ ರಕ್ಷಣೆಗೆ ಎಂದು ಇರುವ ಹೆಲ್ಪ್ಲೈನ್ ಸಂಖ್ಯೆ 1091 ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ" ಟೀಕೆ ಮಾಡಿದರು
"ಹಣವನ್ನು ಖರ್ಚು ಮಾಡುವ ಮೂಲಕ ಜನರ ಮನಸ್ಥಿತಿಯನ್ನು ಬದಲು ಮಾಡಲು ಸಾಧ್ಯವಿಲ್ಲ. ಇದಕ್ಕೆ ಸ್ಪಷ್ಟ ಉದಾಹರಣೆ ನಿರ್ಭಯಾ ನಿಧಿಯಾಗಿದೆ. ರಾಜ್ಯ ಸರಕಾರ ಅದರ ಬಳಕೆಯನ್ನೇ ಮಾಡಿಲ್ಲ" ಎಂದು ತಿಳಿಸಿದ್ದಾರೆ.