ತುಮಕೂರು, ಡಿ 10 (Daijiworld News/MB) : "ಉಪಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ತಿರಸ್ಕರಿಸುವ ಮೂಲಕ ಅವರಿಗೆ ಜನರು ಗೃಹ ಬಂಧನ ಶಿಕ್ಷೆ ನೀಡಿದ್ದಾರೆ. ಸಿದ್ಧರಾಮಯ್ಯ ಅವರು ರಾಜೀನಾಮೆ ನೀಡುವುದಲ್ಲ ಅವರಿಗೆ ಮಾನ ಮರ್ಯಾದೆ ಇದ್ದರೆ ಜನರಲ್ಲಿ ಕ್ಷಮೆ ಕೇಳಬೇಕು" ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಒತ್ತಾಯಿಸಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತಾನಾಡಿದ ಅವರು, "ಸಿದ್ಧರಾಮಯ್ಯನವರು ಪಿತೂರಿ ಮಾಡಿ ಯಡಿಯೂರಪ್ಪನವರನ್ನು ಜೈಲಿಗೆ ಕಳುಹಿಸಿ ಆ ನಂತರ ಮಾತು ಮಾತಿಗೆ ಯಡಿಯೂರಪ್ಪ ಜೈಲಿಗೆ ಹೋದವರು ಎಂದು ಅವಹೇಳನ ಮಾಡುತ್ತಿದ್ದರು. ಯಡಿಯೂರಪ್ಪ ಹಾಗೂ ಬಿಜೆಪಿ ವಿರುದ್ಧ ಅವರು ಮಾತಾನಾಡುವಾಗ ಅವರ ಹಾವಭಾವ ಅಸಹ್ಯವಾಗಿರುತ್ತಿತ್ತು. ಯಡಿಯೂರಪ್ಪನವರಿಗೆ ಅವರು ಮಾಡಿದ ಅವಮಾನಕ್ಕೆ ಜನರು ತಕ್ಕ ಶಿಕ್ಷೆ ನೀಡಿದ್ದಾರೆ" ಎಂದು ಹೇಳಿದರು.
"ಕರ್ನಾಟಕದ ಜನರು ದುರಹಂಕಾರದಿಂದ ತುಂಬಿದ ಸಿದ್ಧರಾಮಯ್ಯ ಹೋಗಬೇಕು ಎಂದು ಯಡಿಯೂರಪ್ಪ ಪರ ಮತದಾನ ಮಾಡಿದ್ದಾರೆ. ಸಿದ್ಧರಾಮಯ್ಯ ರಾಜೀನಾಮೆ ನೀಡುವುದು ಮತ್ರವಲ್ಲದೇ ಯಡಿಯೂರಪ್ಪ ಹಾಗೂ ನಾಡಿನ ಜನರಲ್ಲಿ ಕ್ಷಮೆ ಕೇಳಬೇಕು" ಎಂದು ಸೊಗಡು ಆಗ್ರಹಿಸಿದ್ದಾರೆ.
"ವಿಧಾನ ಸೌಧದಲ್ಲಿ ನಾನೇ ಧೀರ ನಾನೇ ಶೂರ ಎಂದು ಮೆರೆಯುತ್ತ ಪೈಲ್ವಾನ್ ರೀತಿ ವರ್ತನೆ ಮಾಡುತ್ತಾ ತೊಡೆ ತಟ್ಟುತ್ತಿದ್ದ ಸಿದ್ಧರಾಮಯ್ಯರಿಗೆ ಜನರು ನೀಡಿದ ಶಿಕ್ಷೆಗಿಂತ ಬೇರೆ ಶಿಕ್ಷೆ ಬೇಕೇ ಎಂದು ಪ್ರಶ್ನಿಸಿದ್ದು ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ಮೇಲೂ ದಬ್ಬಾಳಿಕೆ ನಡೆಸಿದ್ದಾರೆ. ಹಾಗಾಗಿ ಕಾಂಗ್ರೆಸ್ನ ಹಿರಿಯ ನಾಯಕರೆಲ್ಲರೂ ಅವರ ವಿರುದ್ಧ ನಿಂತಿದ್ದಾರೆ. ಈ ರೀತಿ ಆಗಲು ಅವರಲ್ಲಿರುವ ದುರಹಂಕಾರವೇ ಕಾರಣ" ಎಂದು ತಿಳಿಸಿದ್ದಾರೆ.