ಮಧುರೈ, ಡಿ 10 (Daijiworld News/MSP): ನಿರ್ಭಯಾ ಗ್ಯಾಂಗ್ ರೇಪ್ ಆರೋಪಿಗಳಿಗೆ ನೇಣಿಗೇರಿಸಲು ತಿಹಾರ್ ನಲ್ಲಿ ಹ್ಯಾಂಗ್ ಮ್ಯಾನ್ ಇಲ್ಲ ಎಂಬ ಸುದ್ದಿಯ ನಡುವೆಯೇ "ಅಪರಾಧಿಗಳನ್ನು ಗಲ್ಲಿಗೇರಿಸಲು ನಾನು ಸಿದ್ಧ" ಎಂದು ತಮಿಳುನಾಡು ಪೊಲೀಸ್ ಇಲಾಖೆ ಮುಖ್ಯಪೇದೆಯೊಬ್ಬರು ತಿಹಾರ್ ಜೈಲಿಗೆ ಪತ್ರ ಬರೆದಿದ್ದಾರೆ.
ತಮಿಳುನಾಡು ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಆಗಿರುವ ಶಿವಗಂಗೆ ಜಿಲ್ಲೆಯ ನಿವಾಶಿಯಾಗಿರುವ 42 ವರ್ಷದ ಎಸ್. ಸುಭಾಷ್ ಶ್ರೀನಿವಾಸನ್ ತಿಹಾರ್ ಜೈಲಿನ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಪತ್ರ ಸೋಮವಾರ ಬೆಳಗ್ಗೆಯೇ ಅಧಿಕಾರಿ ಕೈ ಸೇರಿರುವ ಬಗ್ಗೆ ಅಂಚೆ ಇಲಾಖೆ ತಿಳಿಸಿದ್ದು, ತಿಹಾರ್ ಜೈಲಾಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಿದ್ದಾರೆ.
ಜೈಲಿನಲ್ಲಿ ನಿರ್ಭಯಾ ಪ್ರಕರಣದ ಅಪರಾಧಿಗಳಿಗೆ ನೇಣುಗಂಬಕ್ಕೆ ಏರಿಸಲು ಹ್ಯಾಂಗ್ ಮ್ಯಾನ್ ಇಲ್ಲ ಎನ್ನುವುದು ನನಗೆ ತಿಳಿದಿದ್ದು, ಈ ಹಿನ್ನೆಲೆ ನಾನು ಹ್ಯಾಂಗ್ ಮ್ಯಾನ್ ಆಗಲು ಸ್ವಯಂಸೇವೆ ಮಾಡಲು ಬಯಸುತ್ತೇನೆ. ಕೆಲಸಕ್ಕೆ ಯಾವುದೇ ಸಂಭಾವನೆ ನಾನು ತೆಗೆದುಕೊಳ್ಳಲು ಬಯಸುವುದಿಲ್ಲ ಎಂದು ಶ್ರೀನಿವಾಸನ್ ತಿಹಾರ್ ಜೈಲಿನ ಡಿಜಿಪಿ ಉಸ್ತುವಾರಿಗೆ ಪತ್ರ ಬರೆದಿದ್ದಾರೆ.
"ಹೇಯ ಅಪರಾಧಿಗಳಿಗೆ ಕಠಿಣ ಶಿಕ್ಷೆ ಕಾದಿದೆ, ತಾವೆಸಗಿದ ಕ್ರೂರ ಕೃತ್ಯಕ್ಕೆ ಸಾವಿನ ಕುಣಿಕೆ ತಪ್ಪದು ಎಂಬ ಬಲವಾದ ಸಂದೇಶ ರವಾನಿಸಲು ಇಚ್ಚಿಸುತ್ತೇನೆ" ಎಂದು ಹೇಳಿದ್ದಾರೆ.