ನವದೆಹಲಿ, ಡಿ 10 (DaijiworldNews/SM): ಲೋಕಸಭೆಯಲ್ಲಿ ಆಂಗ್ಲೋ ಇಂಡಿಯನ್ ಸಮುದಾಯಕ್ಕೆ ಇದ್ದ ಮೀಸಲಾತಿ ರದ್ದುಗೊಂಡಿದೆ. ಈ ಮೀಸಲಾತಿ ರದ್ದು ಮಾಡುವ ಮಸೂದೆ ಲೋಕಸಭೆಯಲ್ಲಿ ಮಂಡನೆಯಾಗಿದ್ದು, ಸರ್ವಾನುಮತಿಯಿಂದ ಅಂಗೀಕಾರಗೊಂಡಿದೆ.
ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಮಸೂದೆಯನ್ನು ಮಂಡನೆ ಮಾಡಿದರು. ಇದಕ್ಕೆ ತೃಣಮೂಲ ಕಾಂಗ್ರೆಸ್ ಸಂಸದರೊಬ್ಬರು ವಿರೋಧ ವ್ಯಕ್ತಪಡಿಸಿದರು. ಈ ನಡುವೆ ಮಸೂದೆಯನ್ನು ಧ್ವನಿಮತದ ಮೂಲಕ ಬಹುಮತಕ್ಕಿಡಲಾಯಿತು. ಹಾಗೂ ಬಹುಮತದೊಂದಿಗೆ ಅಂಗೀಕಾರಗೊಂಡಿತು.
ಲೋಕಸಭೆಯಲ್ಲಿ 545 ಸ್ಥಾನಗಳಿದ್ದು, ಈ ಪೈಕಿ 84 ಪರಿಶಿಷ್ಟ ಜಾತಿ, 47 ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿವೆ. ಹಾಗೂ 2 ಸ್ಥಾನಗಳು ಆಂಗ್ಲೋ ಇಂಡಿಯನ್ ಕೋಟಾಕ್ಕೆ ಮೀಸಲಾಗಿವೆ. ಈ ಇಬ್ಬರು ಸದಸ್ಯರಿಗೆ ಯಾವುದೇ ಒಂದು ಸ್ವಂತ ರಾಜ್ಯದ ನೆಲೆವಾಸದ ಆಧಾರವಿಲ್ಲ. ಉಳಿದಂತೆ ಆಂಧ್ರ ಪ್ರದೇಶ, ತಮಿಳುನಾಡು, ಬಿಹಾರ, ಪಶ್ಚಿಮ ಬಂಗಾಲ, ಕರ್ನಾಟಕ ಮತ್ತು ಕೇರಳ ಇತ್ಯಾದಿ ರಾಜ್ಯಗಳ ವಿಧಾನಸಭೆಗಳಲ್ಲಿ ಆಯಾ ಸಮುದಾಯದಿಂದ ಪ್ರಾತಿನಿಧ್ಯ ಪಡೆದಿದ್ದಾರೆ. ಇದೇ ರೀತಿ ಎಲ್ಲಾ ರಾಜ್ಯಗಳ ವಿಧಾನಸಭೆಯಲ್ಲಿ ಒಂದು ಸ್ಥಾನ ಮೀಸಲಾಗಿರುತ್ತದೆ.
ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ಇಬ್ಬರು ಸದಸ್ಯರನ್ನು ನಾಮ ನಿರ್ದೇಶನ ಮಾಡಲಾಗಿತ್ತು. ಆದರೆ ಈ ಬಾರಿ ಮೋದಿ ಸರ್ಕಾರ್ 2.0ದಲ್ಲಿ ಲೋಕಸಭೆಗೆ ಆಂಗ್ಲೋ ಇಂಡಿಯನ್ ನಾಮನಿರ್ದೇಶನಮಾಡಿಲ್ಲ. ಮೀಸಲಾತಿಯನ್ನು ರದ್ದುಗೊಳಿಸುವ ಯೋಜನೆಯನ್ನು ಈ ಹಿಂದೆಯೇ ಮೋದಿ ಸರಕಾರ ಹೊಂದಿದ್ದರಿಂದಾಗಿ ನೇಮಕ ಮಾಡಿಲ್ಲ ಎನ್ನಲಾಗಿದೆ. ಆಂಗ್ಲೋ ಇಂಡಿಯನ್ ಮೀಸಲಾತಿ ಕೋಟಾ ರದ್ದು ಮಾಡುವ ಬಗ್ಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ಸಮಾಜ ಕಲ್ಯಾಣ ಸಚಿವ ತಾವರ್ ಚಂದ್ ಗೆಹ್ಲೋಟ್ ಅವರನ್ನೊಳಗೊಂಡ ನಿಯೋಗದ ಶಿಫಾರಸ್ಸನ್ನು ಅಂಗೀಕರಿಸಲಾಗಿತ್ತು.